ಬ್ರಿಜ್‍ಭೂಷಣ್‍ನನ್ನು ಸರ್ಕಾರಿ ಸಮಿತಿ ದೋಷಮುಕ್ತಗೊಳಿಸಿಲ್ಲ: ದೆಹಲಿ ಪೊಲೀಸರು

Update: 2023-09-17 02:57 GMT

ಬ್ರಿಜ್‍ಭೂಷಣ್‍ | Photo: PTI  

ಹೊಸದಿಲ್ಲಿ: ಮಹಿಳಾ ಕುಸ್ತಿಪಟುಗಳಿಗೆ ಲೈಂಗಿಕ ಕಿರುಕುಳ ನೀಡಿರುವ ಆರೋಪ ಎದುರಿಸುತ್ತಿರುವ ಭಾರತೀಯ ಕುಸ್ತಿ ಫೆಡರೇಷನ್‍ನ ಮಾಜಿ ಅಧ್ಯಕ್ಷ ಮತ್ತು ಬಿಜೆಪಿ ಸಂಸದ ಬ್ರಿಜ್‍ಭೂಷಣ್‍ ಶರಣ್ ಸಿಂಗ್‍ನನ್ನು, ಈ ಬಗ್ಗೆ ತನಿಖೆ ನಡೆಸಲು ನೇಮಕ ಮಾಡಿದ್ದ ಮೇಲುಸ್ತುವಾರಿ ಸಮಿತಿ ದೋಷಮುಕ್ತಗೊಳಿಸಿಲ್ಲ ಎಂದು ದೆಹಲಿ ಪೊಲೀಸರು ಶನಿವಾರ ನ್ಯಾಯಾಲಯಕ್ಕೆ ಸ್ಪಷ್ಟಪಡಿಸಿದ್ದಾರೆ.

"ಆರೋಪಗಳಿಗೆ ಪುರಾವೆ ಇಲ್ಲ ಅಥವಾ ಇವು ತಪ್ಪು ಎನ್ನುವುದನ್ನು ಈ ಸಮಿತಿ ಎಲ್ಲಿಯೂ ಹೇಳಿಲ್ಲ" ಎಂಬ ಅಂಶವನ್ನು ಸರ್ಕಾರಿ ಅಭಿಯೋಜಕರು ನ್ಯಾಯಾಲಯದ ಗಮನಕ್ಕೆ ತಂದರು.

ಹೆಚ್ಚುವರಿ ಮುಖ್ಯ ಮೆಟ್ರೊಪಾಲಿಟನ್ ಮ್ಯಾಜಿಸ್ಟ್ರೇಟ್ ಹರ್ಜೀತ್ ಸಿಂಗ್ ಜಸ್ಪಾಲ್ ಅವರ ಮುಂದೆ ಸಿಂಗ್ ವಿರುದ್ಧ ಆರೋಪಪಟ್ಟಿ ಸಲ್ಲಿಸಬೇಕೇ ಎಂಬ ಬಗ್ಗೆ ನಡೆದ ವಾದ ವಿವಾದದ ವೇಳೆ ಪೊಲೀಸರು ಈ ಹೇಳಿಕೆ ನೀಡಿದರು. ಸಮಿತಿಯ ವರದಿ ಡಬ್ಲ್ಯುಎಫ್‍ಐ ಮಾಜಿ ಅಧ್ಯಕ್ಷರನ್ನು ಎಂದೂ ದೋಷಮುಕ್ತಗೊಳಿಸಿಲ್ಲ ಹಾಗೂ ಪ್ರತಿವಾದಿಗಳು ಈ ಲಾಭವನ್ನು ಪಡೆದುಕೊಳ್ಳಲು ಸಾಧ್ಯವಿಲ್ಲ ಎಂದು ಸ್ಪಷ್ಟಪಡಿಸಿದರು.

"ಸಿಂಗ್ ಸಮಿತಿಯಿಂದ ದೋಷಮುಕ್ತ ಎಂದು ಘೋಷಿಸಲ್ಪಟ್ಟಿಲ್ಲ. ಸಮಿತಿ ಕೇವಲ ಶಿಫಾರಸ್ಸು ಮಾಡಿದ್ದು, ಇದು ಯಾವುದೇ ನ್ಯಾಯನಿರ್ಣಯ ಅಥವಾ ನಿರ್ಧಾರವನ್ನು ಕೈಗೊಂಡಿಲ್ಲ. ಸಮಿತಿ ದೋಷಮುಕ್ತಗೊಳಿಸಿದೆ ಎಂದು ಯಾವುದೇ ಹಂತದಲ್ಲೂ ಹೇಳಲಾಗದು. ಈ ಆರೋಪಗಳಿಗೆ ಆಧಾರ ಇಲ್ಲ ಅಥವಾ ಇದು ತಪ್ಪು ಎಂದು ಎಲ್ಲೂ ಹೇಳಿಲ್ಲ" ಎಂಬುದಾಗಿ ಸರ್ಕಾರಿ ಅಭಿಯೋಜಕ ಅತುಲ್ ಶ್ರೀವಾಸ್ತವ ಹೇಳಿದರು.

ಸಿಂಗ್ ವಿರುದ್ಧ ಭಾರತೀಯ ದಂಡಸಂಹಿತೆ ಕಾಯ್ದೆಯ ಸೆಕ್ಷನ್ 354ರ ಅನ್ವಯ ಆರೋಪಪಟ್ಟಿ ಸಲ್ಲಿಸುವಂತೆ ಅವರು ಆಗ್ರಹಿಸಿದರು.

Tags:    

Writer - ವಾರ್ತಾಭಾರತಿ

contributor

Editor - Ismail

contributor

Byline - ವಾರ್ತಾಭಾರತಿ

contributor

Similar News