BSNL ದತ್ತಾಂಶ ಸೋರಿಕೆಯಾಗಿತ್ತು: ದೃಢಪಡಿಸಿದ ಕೇಂದ್ರ ಸರಕಾರ

Update: 2024-07-25 11:24 GMT

ಹೊಸದಿಲ್ಲಿ: ಮೇ ತಿಂಗಳಲ್ಲಿ ಸರಕಾರಿ ಸ್ವಾಮ್ಯದ ಭಾರತ್ ಸಂಚಾರ್ ನಿಗಮ್ ಲಿಮಿಟೆಡ್ (BSNL)ನ ದತ್ತಾಂಶ ಸೋರಿಕೆಯಾಗಿತ್ತು ಎಂದು ಬುಧವಾರ ಕೇಂದ್ರ ಸರಕಾರವು ದೃಢಪಡಿಸಿದೆ.

ಬುಧವಾರ ಲೋಕಸಭೆಯಲ್ಲಿ ಕಾಂಗ್ರೆಸ್ ಸಂಸದ ಅಮರ್ ಸಿಂಗ್ ಅವರ ಪ್ರಶ್ನೆಗೆ ಉತ್ತರಿಸಿದ ಕೇಂದ್ರ ಸಂಪರ್ಕ ರಾಜ್ಯ ಸಚಿವ ಚಂದ್ರಶೇಖರ್ ಪೆಮ್ಮಸಾನಿ, “BSNL ನಲ್ಲಿ ಮೇ 20ರಂದು ಒಳ ನುಸುಳುವಿಕೆ ಹಾಗೂ ದತ್ತಾಂಶ ಸೋರಿಕೆಯಾಗಿರುವ ಸಾಧ್ಯತೆ ಇದೆ ಎಂದು ಇಂಡಿಯನ್‌ ಕಂಪ್ಯೂಟರ್‌ ಎಮೆರ್ಜೆನ್ಸಿ ರೆಸ್ಪಾನ್ಸ್ ತಂಡವು ವರದಿ ಮಾಡಿದೆ” ಎಂದು ಉತ್ತರ ನೀಡಿದರು.

ದೇಶದ ಸೈಬರ್ ಭದ್ರತಾ ಸಂಸ್ಥೆಯಾದ ಇಂಡಿಯನ್‌ ಕಂಪ್ಯೂಟರ್‌ ಎಮೆರ್ಜೆನ್ಸಿ ರೆಸ್ಪಾನ್ಸ್ ತಂಡವು ವಿದ್ಯುನ್ಮಾನ ಹಾಗೂ ಮಾಹಿತಿ ತಂತ್ರಜ್ಞಾನ ಸಚಿವಾಲಯದಡಿ ಕಾರ್ಯನಿರ್ವಹಿಸುತ್ತದೆ.

“BSNL ನ ಒಂದು ಸರ್ವರ್ ಇಂಡಿಯನ್‌ ಕಂಪ್ಯೂಟರ್‌ ಎಮೆರ್ಜೆನ್ಸಿ ರೆಸ್ಪಾನ್ಸ್ ತಂಡವು ಹಂಚಿಕೊಂಡಿರುವ ದತ್ತಾಂಶದೊಂದಿಗೆ ಸಾಮ್ಯತೆ ಹೊಂದಿತ್ತು. ಹೀಗಾಗಿ ಆ ಸರ್ವರ್ ಅನ್ನು ಬದಲಿಸಲಾಗಿದೆ” ಎಂದು ಪೆಮ್ಮಸಾನಿ ಲೋಕಸಭೆಗೆ ತಿಳಿಸಿದರು.

ದೂರಸಂಪರ್ಕ ಜಾಲಗಳ ಕುರಿತು ಲೆಕ್ಕ ಪರಿಶೋಧನೆ ನಡೆಸಲು ಹಾಗೂ ದತ್ತಾಂಶ ಸೋರಿಕೆಯನ್ನು ತಡೆಯಲು ಪರಿಹಾರದ ಸಲಹೆಗಾಗಿ ಅಂತರ ಸಚಿವಾಲಯ ಸಮಿತಿಯೊಂದನ್ನು ರಚಿಸಲಾಗಿದೆ ಎಂದು ಸಚಿವರು ತಿಳಿಸಿದ್ದಾರೆ.

Tags:    

Writer - ವಾರ್ತಾಭಾರತಿ

contributor

Editor - Thouheed

contributor

Byline - ವಾರ್ತಾಭಾರತಿ

contributor

Similar News