ಬಜೆಟ್ ಅಧಿವೇಶನ ಫೆ.10ರವರೆಗೆ ವಿಸ್ತರಣೆ
ಹೊಸದಿಲ್ಲಿ: ಸಂಸತ್ತಿನ ಬಜೆಟ್ ಅಧಿವೇಶನವನ್ನು ಫೆ.10ರವರೆಗೆ ವಿಸ್ತರಿಸಲಾಗಿದೆ ಎಂದು ಸ್ಪೀಕರ್ ಓಂ ಬಿರ್ಲಾ ಅವರು ಬುಧವಾರ ಪ್ರಕಟಿಸಿದರು.
ಜ.31ರಂದು ಆರಂಭಗೊಂಡಿದ್ದ ಅಧಿವೇಶನವು ನಿಗದಿಯಂತೆ ಫೆ.9ಕ್ಕೆ ಅಂತ್ಯಗೊಳ್ಳಬೇಕಿತ್ತು.
ಬಿಜೆಪಿಯು 2014ರಲ್ಲಿ ಕಾಂಗ್ರೆಸ್ ಅನ್ನು ಪರಾಭವಗೊಳಿಸಿ ಅಧಿಕಾರಕ್ಕೆ ಬರುವ ಮೊದಲಿನ ಮತ್ತು ನಂತರದ ಭಾರತೀಯ ಆರ್ಥಿಕತೆಯ ಸ್ಥಿತಿಯನ್ನು ಹೋಲಿಸಿ ಶ್ವೇತಪತ್ರವನ್ನು ಸರಕಾರವು ಮಂಡಿಸಲಿದೆ ಎಂದು ಸಂಸದೀಯ ವ್ಯವಹಾರಗಳ ಸಚಿವ ಪ್ರಹ್ಲಾದ್ ಜೋಶಿಯವರು ಮಂಗಳವಾರ ತಿಳಿಸಿದ್ದರು.
ಹಣಕಾಸು ಮಸೂದೆ, ಬಜೆಟ್ ಚರ್ಚೆ ಮತ್ತು ಅನುದಾನಗಳಿಗೆ ಬೇಡಿಕೆಯಂತಹ ಅಜೆಂಡಾ ವಿಷಯಗಳನ್ನು ಸಂಸತ್ತು ಇನ್ನಷ್ಟೇ ಕೈಗೆತ್ತಿಕೊಳ್ಳಬೇಕಿದೆ ಮತ್ತು ಶ್ವೇತಪತ್ರವನ್ನೂ ಮಂಡಿಸಬೇಕಿದೆ ಎಂದು ತಿಳಿಸಿದ ಬಲ್ಲ ಮೂಲಗಳು, ಹೀಗಾಗಿ ಅಧಿವೇಶನವನ್ನು ಒಂದು ದಿನ ವಿಸ್ತರಿಸುವುದು ಅಗತ್ಯವಾಗಿದೆ ಎಂದು ಹೇಳಿದವು.
ವಿತ್ತಸಚಿವೆ ನಿರ್ಮಲಾ ಸೀತಾರಾಮನ್ ಅವರು ಸಂಸತ್ತಿನ ಉಭಯ ಸದನಗಳಲ್ಲಿ ಶ್ವೇತಪತ್ರವನ್ನು ಮಂಡಿಸಲಿದ್ದಾರೆ.
ಸಂಸತ್ತು ಸಾಮಾನ್ಯವಾಗಿ ವಾರಾಂತ್ಯಗಳಲ್ಲಿ ಕಾರ್ಯ ನಿರ್ವಹಿಸುವುದಿಲ್ಲ,ಆದರೆ ಶನಿವಾರಗಳಂದೂ ಸದನಗಳು ಕಲಾಪಗಳನ್ನು ನಡೆಸಿರುವ ಹಿಂದಿನ ನಿದರ್ಶನಗಳಿವೆ.