ಹೊಸದಾಗಿ ದಾಖಲೆ ಕೇಳಿದ ಕೆನಡಾ ಸರ್ಕಾರ; ಸಂಕಷ್ಟದಲ್ಲಿ ಭಾರತೀಯ ವಿದ್ಯಾರ್ಥಿಗಳು

Update: 2024-12-14 02:13 GMT

ಸಾಂದರ್ಭಿಕ ಚಿತ್ರ  (PTI)

ಹೈದರಾಬಾದ್: ವಿದ್ಯಾಭ್ಯಾಸಕ್ಕೆ ನೀಡಿದ ಅನುಮತಿ ಪತ್ರ, ವೀಸಾ ಮತ್ತು ಅಂಕಪಟ್ಟಿ ಹಾಗೂ ಹಾಜರಾತಿ ಸೇರಿದಂತೆ ಶೈಕ್ಷಣಿಕ ದಾಖಲೆಗಳಂಥ ಪ್ರಮುಖ ದಾಖಲೆಗಳನ್ನು ಮತ್ತೆ ಸಲ್ಲಿಕೆ ಮಾಡುವಂತೆ ಕೆನಡಾ ಸರ್ಕಾರದಿಂದ ಅಧಿಕೃತ ಇ-ಮೇಲ್ಗಳು ಬಂದಿವೆ ಎಂದು ಕೆನಡಾದಲ್ಲಿ ಅಧ್ಯಯನ ಮಾಡುತ್ತಿರುವ ಭಾರತೀಯ ವಿದ್ಯಾರ್ಥಿಗಳು ದೂರಿದ್ದಾರೆ.

ಕೆನಡಾದ ಇಮಿಗ್ರೇಶನ್, ನಿರಾಶ್ರಿತರು ಮತ್ತು ಪೌರತ್ವ ಸಂಸ್ಥೆ (ಐಆರ್‌ಸಿಸಿ) ವಿದೇಶಿ ವಿದ್ಯಾರ್ಥಿಗಳ ವಿಚಾರದಲ್ಲಿ ವ್ಯವಹರಿಸುತ್ತಿದ್ದು, ಇಲಾಖೆಯ ಈ ಕ್ರಮದಿಂದ ಎರಡು ವರ್ಷಗಳ ವರೆಗೆ ಮಾನ್ಯತೆ ಹೊಂದಿರುವ ವೀಸಾ ಪಡೆದ ವಿದೇಶಿ ವಿದ್ಯಾರ್ಥಿಗಳು ಆತಂಕಿತರಾಗಿದ್ದಾರೆ.

ಅಂತರರಾಷ್ಟ್ರೀಯ ವಿದ್ಯಾರ್ಥಿಗಳ ಒಳಹರಿವನ್ನು ನಿಯಂತ್ರಿಸಲು ಐಆರ್ಸಿಸಿ ನೀತಿಗಳನ್ನು ಬಿಗಿಗೊಳಿಸುತ್ತಿರುವ ನಡುವೆ ಈ ಬೆಳವಣಿಗೆ ನಡೆದಿದೆ. ಕಟ್ಟುನಿಟ್ಟಿನ ಹಣಕಾಸು ಅಗತ್ಯತೆಗಳನ್ನು ವಿಧಿಸಲಾಗುತ್ತಿದ್ದು, ವಿದ್ಯಾರ್ಥಿ ಪ್ರವೇಶಕ್ಕೆ ಮಿತಿ ವಿಧಿಸುವ ಸಾಧ್ಯತೆಗಳನ್ನು ಪರಿಶೀಲಿಸುತ್ತಿದೆ. "ಇಂಥ ಇ-ಮೇಲ್ ಬಂದಾಗ ನಿಜಕ್ಕೂ ಆಘಾತವಾಯಿತು. ನನ್ನ ವೀಸಾ 2026ರವರೆಗೆ ಮಾನ್ಯತೆ ಹೊಂದಿದೆ. ಇದಾಗ್ಯೂ ಎಲ್ಲ ದಾಖಲೆಗಳನ್ನು ಮತ್ತೆ ಸಲ್ಲಿಸುವಂತೆ ಸೂಚಿಸಲಾಗಿದೆ" ಎಂದು ಅವಿನಾಶ್ ಕೌಶಿಕ್ ಎಂಬ ಹೈದರಾಬಾದ್ ಮೂಲದ ಸ್ನಾತಕೋತ್ತರ ವಿದ್ಯಾರ್ಥಿ ಹೇಳಿದ್ದಾರೆ.

ಕಳೆದ ವಾರದಿಂದ ಪಂಜಾಬ್ ವಿದ್ಯಾರ್ಥಿಗಳಿಗೂ ಇಂಥ ಇ-ಮೇಲ್ ಹೆಚ್ಚಿದೆ. ಕೆಲ ವಿದ್ಯಾರ್ಥಿಗಳು ಐಆರ್ಸಿಸಿ ಅಧಿಕಾರಿಗಳ ಮುಂದೆ ಹಾಜರಾಗಿ ದೃಢಪಡಿಸುವಂತೆಯೂ ಸೂಚಿಸಲಾಗಿದೆ. ವಿದ್ಯಾರ್ಥಿಗಳಲ್ಲಿ ಗೊಂದಲ ಮತ್ತು ಭೀತಿ ಮೂಡಿದೆ ಎಂದು ಅವಿನಾಶ್ ದಾಸರಿ ಎಂಬ ಮತ್ತೊಬ್ಬ ವಿದ್ಯಾರ್ಥಿ ಸ್ಪಷ್ಟಪಡಿಸಿದ್ದಾರೆ.

Tags:    

Writer - ವಾರ್ತಾಭಾರತಿ

contributor

Editor - jafar sadik

contributor

Byline - ವಾರ್ತಾಭಾರತಿ

contributor

Similar News