"ಬೆಂಗಳೂರಿನಲ್ಲಿದ್ದೂ ಕನ್ನಡ ಕಲಿತಿಲ್ಲವೆ? ಹಾಗಿದ್ದರೆ ದಿಲ್ಲಿಗೆ ಮರಳಿ ಬನ್ನಿ...": ವಿವಾದ ಸೃಷ್ಟಿಸಿದ ʼCars24ʼ ಸಿಇಒ ವಿಕ್ರಂ ಚೋಪ್ರಾ ಪೋಸ್ಟ್

Update: 2024-12-20 11:04 GMT

 ವಿಕ್ರಂ ಚೋಪ್ರಾ | NDTV

ಹೊಸದಿಲ್ಲಿ: ಕನ್ನಡ ನುಡಿ ಜಾತ್ರೆಯಾದ 87ನೇ ಕನ್ನಡ ಸಾಹಿತ್ಯ ಸಮ್ಮೇಳನ ಮಂಡ್ಯದಲ್ಲಿಂದು ಪ್ರಾರಂಭಗೊಂಡಿರುವ ಬೆನ್ನಿಗೇ, ಕಾರ್ಸ್24 ಸಿಇಒ ವಿಕ್ರಂ ಚೋಪ್ರಾ ಮಾಡಿರುವ ಒಂದು ಪೋಸ್ಟ್ ವಿವಾದ ಸೃಷ್ಟಿಸಿದೆ. ಎಕ್ಸ್ ನಲ್ಲಿ ಪೋಸ್ಟ್ ಮಾಡಿರುವ ವಿಕ್ರಂ ಚೋಪ್ರಾ, “ಇಷ್ಟು ವರ್ಷ ಬೆಂಗಳೂರಿನಲ್ಲಿದ್ದೂ, ಕನ್ನಡ ಕಲಿತಿಲ್ಲವೆ? ಸರಿ. ದಿಲ್ಲಿಗೆ ಮರಳಿ ಬನ್ನಿ” ಎಂದು ತಮ್ಮ ಸಂಸ್ಥೆಯ ಬೆಂಗಳೂರು ಉದ್ಯೋಗಿಗಳಿಗೆ ಹೇಳಿದ್ದಾರೆ.

“ನಾವು ದಿಲ್ಲಿ ಎನ್ಸಿಆರ್ ಉತ್ತಮ ಎಂದು ಹೇಳುತ್ತಿಲ್ಲ. ಆದರೆ, ಅದೇ ಸತ್ಯವಾಗಿದೆ. ಯಾರಾದರೂ ದಿಲ್ಲಿಗೆ ಮರಳಲು ಬಯಸಿದರೆ, ‘ದಿಲ್ಲಿ ಮೇರಿ ಜಾನ್’ ಎಂದು ವಿಷಯವನ್ನು ಉಲ್ಲೇಖಿಸಿ, ನನಗೆ ಇಮೇಲ್ ಮಾಡಿ” ಎಂದೂ ಅವರು ಬರೆದುಕೊಂಡಿದ್ದಾರೆ.

ಈ ಪೋಸ್ಟ್ ಗೆ ಕನ್ನಡಿಗರಿಂದ ಆಕ್ರೋಶ ವ್ಯಕ್ತವಾಗಿದೆ.

ಈ ಪೋಸ್ಟ್ ಗೆ ಪ್ರತಿಕ್ರಿಯಿಸಿರುವ ಸಾಮಾಜಿಕ ಮಾಧ್ಯಮ ಬಳಕೆದಾರರೊಬ್ಬರು, “ಮೂಲಭೂತವಾಗಿ ನಿಮ್ಮ ತಂಡದಲ್ಲಿ ಉತ್ತರ ಭಾರತೀಯ/ದಿಲ್ಲಿ ನಿವಾಸಿಗಳಿರಬೇಕು? ಉಳಿದ ಜನರ ಕತೆ?” ಎಂದು ಪ್ರಶ್ನಿಸಿದ್ದಾರೆ.

“ದಿಲ್ಲಿ ಎನ್ಸಿಆರ್ ಗೆ ಹೊಳಪಿದೆ. ಆದರೆ, ಅದನ್ನು ಉತ್ತಮ ಎಂದು ಕರೆಯುವುದಕ್ಕೂ ಮುನ್ನ, ವಾಸ್ತವವನ್ನು ಪರಿಗಣಿಸಿ. ಅಪರಾಧ ದತ್ತಾಂಶದತ್ತ ಕಣ್ಣಾಡಿಸಿದರೆ, ಬೇರೆಯದೇ ಸತ್ಯ ಕಂಡು ಬರಬಹುದು. ಈ ಕ್ರಮ ಕೈಗೊಳ್ಳುವುದಕ್ಕೂ ಮುನ್ನ, ಎರಡು ಬಾರಿ ಯೋಚಿಸಿ” ಎಂದು ಮತ್ತೊಬ್ಬ ಬಳಕೆದಾರರು ಛೇಡಿಸಿದ್ದಾರೆ.

ಮತ್ತೊಬ್ಬ ಬಳಕೆದಾರರು ವಿಕ್ರಂ ಚೋಪ್ರಾರ 2009ರ ಪೋಸ್ಟ್ ಅನ್ನು ಎಳೆದು ತಂದಿದ್ದು, ಆ ಪೋಸ್ಟ್ ನಲ್ಲಿ, “ದಿಲ್ಲಿಯಲ್ಲಿನ ಬಹು ದೊಡ್ಡ ಸಮಸ್ಯೆಯೆಂದರೆ, ಇಲ್ಲಿನ ಜನಗಳೊಂದಿಗೆ ವ್ಯವಹರಿಸುವುದು” ಎಂದು ಅವರು ಬರೆದಿರುವುದರತ್ತ ಗಮನ ಸೆಳೆದಿದ್ದಾರೆ.

ಆದರೆ, ಚೋಪ್ರಾರನ್ನು ಬೆಂಬಲಿಸಿರುವ ಇನ್ನೂ ಕೆಲವು ಸಾಮಾಜಿಕ ಮಾಧ್ಯಮ ಬಳಕೆದಾರರು, ಬೆಂಗಳೂರಿನಲ್ಲಿ ವಾಸಿಸುತ್ತಿರುವ ಹಾಗೂ ಕೆಲಸ ಮಾಡುತ್ತಿರುವ ಕನ್ನಡೇತರರು ಎದುರಿಸುತ್ತಿರುವ ಸವಾಲುಗಳನ್ನು ಈ ಪೋಸ್ಟ್ ದೃಢೀಕರಿಸಿದೆ ಎಂದು ವಾದಿಸಿದ್ದಾರೆ.

Tags:    

Writer - ವಾರ್ತಾಭಾರತಿ

contributor

Editor - Ismail

contributor

Byline - ವಾರ್ತಾಭಾರತಿ

contributor

Similar News