ಮಹುವಾ ತಮ್ಮ ಪರ ವಾದ ಮಂಡಿಸುವುದನ್ನು ತಡೆಯಲಾಗದು: ದಿಲ್ಲಿ ಹೈಕೋರ್ಟ್
ಹೊಸದಿಲ್ಲಿ: ಟಿಎಂಸಿ ನಾಯಕಿ ಮಹುವಾ ಮೊಯಿತ್ರಾ ಅವರು ಪ್ರಶ್ನೆಗಾಗಿ ನಗದು ಪ್ರಕರಣದಲ್ಲಿ ತಮ್ಮ ಪರವಾಗಿ ತಾವೇ ಮಂಡಿಸುವ ವಾದದಲ್ಲಿ ಆಕೆಯ ಹೇಳಿಕೆಗಳು ಸುಳ್ಳು ಆಗಿರದ ಹೊರತು ಆಕೆಯನ್ನು ವಾದ ಮಂಡಿಸುವುದರಿಂದ ತಡೆಯಲು ಸಾಧ್ಯವಿಲ್ಲ ಎಂದು ದಿಲ್ಲಿ ಹೈಕೋರ್ಟ್ ಹೇಳಿದೆ.
ತಮ್ಮ ವಿರುದ್ಧ ಮಹುವಾ ಮಾನಹಾನಿಕರ ಹೇಳಿಕೆಗಳಿಂದ ನೀಡುವುದನ್ನು ನಿಲ್ಲಿಸಲು ಮಧ್ಯಂತರ ತಡೆಯಾಜ್ಞೆ ವಿಧಿಸಬೇಕೆಂದು ಕೋರಿ ವಕೀಲ ಜೈ ಅನಂತ್ ದೆಹದ್ರಾಯಿ ಅವರು ಸಲ್ಲಿಸಿದ್ದ ಅರ್ಜಿಯ ವಿಚಾರಣೆ ವೇಳೆ ನ್ಯಾಯಾಲಯ ಮೇಲಿನಂತೆ ಹೇಳಿದೆ.
ಪ್ರಶ್ನೆಗಾಗಿ ನಗದು ಪ್ರಕರಣಕ್ಕೆ ಸಂಬಂಧಿಸಿದಂತೆ ತಮ್ಮ ವಿರುದ್ಧ ಮಾನಹಾನಿಕರ ಹೇಳಿಕೆಗಳನ್ನು ನೀಡಿದ್ದಕ್ಕಾಗಿ ರೂ. 2 ಕೋಟಿ ಮಾನನಷ್ಟ ಪರಿಹಾರ ಕೋರಿ ಮಹುವಾ ವಿರುದ್ಧ ದೆಹದ್ರಾಯಿ ಪ್ರಕರಣ ದಾಖಲಿಸಿದ್ದಾರೆ.
“ಆರೋಪಗಳನ್ನು ಬಹಿರಂಗವಾಗಿ ಮಾಡಿರುವಾಗ ಆಕೆಗೆ ತನ್ನ ಸಮರ್ಥನೆಗೆ ತಾನೇ ವಾದ ಮಂಡಿಸುವ ಎಲ್ಲಾ ಹಕ್ಕು ಇದೆ. ಆದರೆ ಯಾವುದೇ ಸುಳ್ಳು ಹೇಳಿಕೆ ಆಕೆ ನೀಡುವಂತಿಲ್ಲ,” ಎಂದು ನ್ಯಾಯಮೂರ್ತಿ ಪ್ರತೀಕ್ ಜಲನ್ ಹೇಳಿದರು.
ತಮ್ಮ ಕಕ್ಷಿಗಾರರ ಹೇಳಿಕೆಗಳು ಮಾನಹಾನಿಕರ ಸ್ವರೂಪದ್ದಲ್ಲ ಹಾಗೂ ಸಮರ್ಥನೀಯವಾಗಿದೆ ಎಂದು ಮಹುವಾ ಪರ ವಕೀಲರು ಹೇಳಿದರು.
ಮಹುವಾ ಹೇಳಿಕೆಯು ತನ್ನ ಘನತೆಗೆ ಕುಂದುಂಟು ಮಾಡಿದೆ ಹಾಗೂ ಕುಟುಂಬ, ಸ್ನೇಹಿತರು ಮತ್ತು ಸಹೋದ್ಯೋಗಿಗಳು ವೈಯಕ್ತಿಕ ಸಂಬಂಧ ಹದಗೆಟ್ಟಿದ್ದರಿಂದ ದ್ವೇಷ ಸಾಧಿಸಲು ಸುಳ್ಳು ದೂರು ದಾಖಲಿಸಿದ್ದಾನೆಂದು ಹೇಳುವಂತಾಗಿದೆ ಎಂದು ದೆಹದ್ರಾಯಿ ಪರವಾಗಿ ಅವರ ವಕೀಲರು ಹೇಳಿದರು.
ಮುಂದಿನ ವಿಚಾರಣೆ ಎಪ್ರಿಲ್ 25ಕ್ಕೆ ನಿಗದಿಯಾಗಿದೆ.