ನನ್ನ ಆತ್ಮಗೌರವಕ್ಕೆ ವಿರುದ್ಧವಾಗಿ ಕೆಲಸ ಮಾಡಲಾರೆ: ರಾಜೀನಾಮೆ ಘೋಷಿಸಿದ ಬಾಂಬೆ ಹೈಕೋರ್ಟ್‌ ನ್ಯಾಯಮೂರ್ತಿ

Update: 2023-08-04 16:19 GMT

Justice Rohit Deo (Photo: Twitter/@CMOMaharashtra)

ನಾಗ್ಪುರ: ವೈಯಕ್ತಿಕ ಕಾರಣಗಳಿಂದ ತಾನು ರಾಜೀನಾಮೆ ನೀಡುತ್ತಿರುವುದಾಗಿ ಬಾಂಬೆ ಹೈಕೋರ್ಟ್‌ನ ನ್ಯಾಯಮೂರ್ತಿ ರೋಹಿತ್ ಡಿಯೊ ಶುಕ್ರವಾರ ಹೇಳಿದ್ದಾರೆ. ಹೈಕೋರ್ಟ್ ಪೀಠ ಹೊಂದಿರುವ ನಾಗ್ಪುರದ ತಮ್ಮ ನ್ಯಾಯಾಲಯದ ಕೊಠಡಿಯಲ್ಲಿ ಈ ಕುರಿತು ಘೋಷಣೆ ಮಾಡಿದ ನ್ಯಾಯಮೂರ್ತಿ ರೋಹಿತ್ ಡಿಯೊ ಅವರು, ʼಸ್ವಾಭಿಮಾನದ ವಿಷಯದಲ್ಲಿ ರಾಜಿ ಮಾಡಿಕೊಳ್ಳಲು ಸಾಧ್ಯವಿಲ್ಲʼ ಎಂದು ಹೇಳಿರುವುದಾಗಿ ಸ್ಥಳದಲ್ಲಿದ್ದ ವಕೀಲರು ತಿಳಿಸಿದ್ದಾರೆ.

"ನಾನು ನಿಮ್ಮಲ್ಲಿ ಪ್ರತಿಯೊಬ್ಬರಲ್ಲಿ ಕ್ಷಮೆಯಾಚಿಸುತ್ತೇನೆ, ನಾನು ನಿಮ್ಮನ್ನು ಗದರಿಸಿದ್ದೇನೆ. ಯಾರಿಗಾದರೂ ನೋವಾಗಿದ್ದರೆ ಕ್ಷಮೆ ಇರಲಿ. ನಾನು ನಿಮ್ಮಲ್ಲಿ ಯಾರನ್ನೂ ನೋಯಿಸಲು ಬಯಸುವುದಿಲ್ಲ. ಏಕೆಂದರೆ, ನೀವೆಲ್ಲರೂ ನನಗೆ ಕುಟುಂಬದವರಂತೆ. ನನ್ನ ಆತ್ಮಗೌರವಕ್ಕೆ ವಿರುದ್ಧವಾಗಿ ಕೆಲಸ ಮಾಡಲಾರೆ, ನೀವು ಕಷ್ಟಪಟ್ಟು ಕೆಲಸ ಮಾಡಿ, ನಾನು ರಾಜೀನಾಮೆ ಸಲ್ಲಿಸಿದ್ದೇನೆ'' ಎಂದು ನ್ಯಾಯಾಲಯದ ಆವರಣದಲ್ಲಿ ರೋಹಿತ್ ಡಿಯೊ ಹೇಳಿದ್ದಾರೆ.

ಸುದ್ದಿಗಾರರೊಂದಿಗೆ ಮಾತನಾಡಿದ ನ್ಯಾಯಾಧೀಶರು, ತಾನು ವೈಯಕ್ತಿಕ ಕಾರಣಗಳಿಂದ ರಾಜೀನಾಮೆ ನೀಡಿದ್ದೇನೆ ಎಂದು ತಿಳಿಸಿದ್ದಾರೆ. ಅಲ್ಲದೆ, ಭಾರತದ ರಾಷ್ಟ್ರಪತಿಗಳಿಗೆ ರಾಜೀನಾಮೆ ಪತ್ರವನ್ನು ಕಳುಹಿಸಿರುವುದಾಗಿ ಅವರು ಹೇಳಿದ್ದಾರೆ.

2022 ರಲ್ಲಿ, ಹೈಕೋರ್ಟ್‌ನ ನಾಗ್ಪುರ ಪೀಠದ ಹಿರಿಯ ನ್ಯಾಯಾಧೀಶರಾಗಿದ್ದ ಅವರು ಮಾವೋವಾದಿ ಸಂಪರ್ಕಗಳ ಆರೋಪದ ಪ್ರಕರಣದಲ್ಲಿ ದಿಲ್ಲಿ ವಿಶ್ವವಿದ್ಯಾಲಯದ ಮಾಜಿ ಪ್ರೊಫೆಸರ್ ಜಿಎನ್ ಸಾಯಿಬಾಬಾ‌ ಅವರಿಗೆ ನೀಡಲಾಗಿದ್ದ ಜೀವಾವಧಿ ಶಿಕ್ಷೆಯನ್ನು ಬದಿಗಿಟ್ಟು ಅವರನ್ನು ಖುಲಾಸೆಗೊಳಿಸಿ ತೀರ್ಪು ನೀಡಿದ್ದ ಪೀಠದಲ್ಲಿ ಸದಸ್ಯರಾಗಿದ್ದರು. ನಂತರ ಸುಪ್ರೀಂ ಕೋರ್ಟ್ ಆದೇಶವನ್ನು ತಡೆಹಿಡಿದು, ಪ್ರಕರಣವನ್ನು ಹೊಸದಾಗಿ ವಿಚಾರಣೆ ಮಾಡಲು ಹೈಕೋರ್ಟ್‌ನ ನಾಗ್ಪುರ ಪೀಠಕ್ಕೆ ಆದೇಶಿಸಿತ್ತು.

Tags:    

Writer - ವಾರ್ತಾಭಾರತಿ

contributor

Editor - Ismail

contributor

Byline - ವಾರ್ತಾಭಾರತಿ

contributor

Similar News