ರಾಹುಲ್ ಗಾಂಧಿಯ ʼಭಾರತ್ ಜೋಡೋ ನ್ಯಾಯ್ ಯಾತ್ರೆʼ ವಿರುದ್ಧ ಅಸ್ಸಾಂನಲ್ಲಿ ಎಫ್‌ಐಆರ್
ಗುವಾಹಟಿ: ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಅವರ ಭಾರತ್ ಜೋಡೋ ನ್ಯಾಯ್ ಯಾತ್ರೆ ಮತ್ತು ಅದರು ಆಯೋಜಕ ಕೆ ಬಿ ಬೈಜಿಯು ಅವರ ವಿರುದ್ಧ ಅಸ್ಸಾಂ ಪೊಲೀಸರು ಪ್ರಕರಣ ದಾಖಲಿಸಿದ್ದಾರೆ. ಯಾತ್ರೆಯ ಮಾರ್ಗದ ಕುರಿತಂತೆ ಸರ್ಕಾರದ ಮಾರ್ಗಸೂಚಿಗಳನ್ನು ಉಲ್ಲಂಘಿಸಿದ್ದಾರೆಂಬ ಕಾರಣಕ್ಕೆ ಈ ಪ್ರಕರಣ ದಾಖಲಾಗಿದೆ.
ನಿಯೋಜಿತ ಹಾದಿಯನ್ನು ಬಿಟ್ಟು ಯಾತ್ರೆಯು ಜೊರ್ಹಟ್ ಪಟ್ಟಣದ ಮೂಲಕ ಗುರುವಾರ ಅಪರಾಹ್ನ ಸಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.
ಯಾತ್ರೆಯ ಹಾದಿಯಲ್ಲಾದ ದಿಢೀರ್ ಬದಲಾವಣೆಯಿಂದಾಗಿ ಸಂಚಾರ ವ್ಯತ್ಯಯವುಂಟಾಗಿತ್ತಲ್ಲದೆ ಬೈಜಿಯು ಮತ್ತಿತರರು ಟ್ರಾಫಿಕ್ ಬ್ಯಾರಿಕೇಡುಗಳನ್ನು ಮುರಿಯಲು ನೆರೆದಿದ್ದವರನ್ನು ಪ್ರಚೋದಿಸಿದರು ಮತ್ತು ಕರ್ತವ್ಯದಲ್ಲಿದ್ದ ಪೊಲೀಸ್ ಅಧಿಕಾರಿಗಳ ಮೇಲೆ ಹಲ್ಲೆ ನಡೆಸಿದ್ದಾರೆ ಎಂದು ಪೊಲೀಸರು ಆರೋಪಿಸಿದ್ದಾರೆ.
ಈ ಕುರಿತು ಪ್ರತಿಕ್ರಿಯಿಸಿದ ವಿಪಕ್ಷ ನಾಯಕ ದೇಬಬ್ರತ ಸೈಕಿಯಾ, ಯಾತ್ರೆಗೆ ಅನಗತ್ಯ ಅಡ್ಡಿಯುಂಟು ಮಾಡಲು ಈ ಎಫ್‌ಐಆರ್ ದಾಖಲಿಸಲಾಗಿದೆ ಎಂದು ಹೇಳಿದ್ದಾರೆ.
“ಯಾತ್ರೆ ಸಾಗುತ್ತಿದ್ದಾಗ ಪಿಡಬ್ಲ್ಯುಡಿ ಪಾಯಿಂಟ್‌ನಲ್ಲಿ ಯಾರೂ ಪೊಲೀಸರಿರಲಿಲ್ಲ, ನಿಯೋಜಿತ ಹಾದಿಯು ತೀರಾ ಇಕ್ಕಟ್ಟಾಗಿತ್ತು ಹಾಗೂ ಜನರ ಸಂಖ್ಯೆ ಹೆಚ್ಚಿತ್ತು. ಕೆಲವೇ ಮೀಟರುಗಳಷ್ಟು ದೂರ ಬೇರೆ ಹಾದಿಯಲ್ಲಿ ಸಾಗಿದೆವು. ಸಿಎಂ ಹಿಮಂತ ಬಿಸ್ವಶರ್ಮ ಅವರಿಗೆ ಮೊದಲ ದಿನ ಯಾತ್ರೆಗೆ ದೊರೆತ ಯಶಸ್ಸು ನೋಡಿ ಭಯವಾಗಿತ್ತು, ಅದಕ್ಕೆ ಯಾತ್ರೆಗೆ ಅಡ್ಡಿಯುಂಟು ಮಾಡಲು ಯತ್ನಿಸುತ್ತಿದ್ದಾರೆ,” ಎಂದು ಅವರು ಹೇಳಿದರು.
ರಾಹುಲ್ ಅವರ ಯಾತ್ರೆಯು ಅಸ್ಸಾಂನಲ್ಲಿ ಜನವರಿ 25ರ ತನಕ ಸಂಚರಿಸಲಿದ್ದು ರಾಜ್ಯದ 17 ಜಿಲ್ಲೆಗಳಲ್ಲಿ 833 ಕಿಮೀ ದೂರ ಸಾಗಲಿದೆ.