ʼಬಿಜೆಪಿ ಸಂಸದ ರವಿ ಕಿಶನ್ ನನ್ನ ಪುತ್ರಿಯ ತಂದೆʼ ಎಂದು ಆರೋಪಿಸಿದ್ದ ಮಹಿಳೆಯ ವಿರುದ್ಧ ಪ್ರಕರಣ ದಾಖಲು
ಲಕ್ನೊ (ಉತ್ತರ ಪ್ರದೇಶ): ನಟ ಹಾಗೂ ಗೋರಖ್ ಪುರ್ ಲೋಕಸಭಾ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ರವಿ ಕಿಶನ್ ನನ್ನ ಪುತ್ರಿಯ ತಂದೆ ಎಂದು ಆರೋಪಿಸಿದ್ದ ಮಹಿಳೆಯ ವಿರುದ್ಧ ಲಕ್ನೊದಲ್ಲಿ ಪ್ರಕರಣ ದಾಖಲಾಗಿದೆ.
ರವಿ ಕಿಶನ್ ಪತ್ನಿ ಪ್ರೀತಿ ಶುಕ್ಲಾ ದಾಖಲಿಸಿರುವ ದೂರನ್ನು ಆಧರಿಸಿ ಪೊಲೀಸರು ಈ ಕ್ರಮ ಕೈಗೊಂಡಿದ್ದಾರೆ.
ಸೋಮವಾರ ನಡೆದಿದ್ದ ಪತ್ರಿಕಾ ಗೋಷ್ಠಿಯಲ್ಲಿ ಮುಂಬೈ ನಿವಾಸಿಯಾದ ಅಪರ್ಣಾ ಸೋನಿ ಅಲಿಯಾಸ್ ಅಪರ್ಣಾ ಠಾಕೂರ್ ಎಂಬುವವರು ತಮ್ಮ 25 ವರ್ಷದ ಪುತ್ರಿ ಶಿನೋವಾಳ ತಂದೆ ರವಿ ಕಿಶನ್ ಎಂದು ಪ್ರತಿಪಾದಿಸಿದ್ದರು. ರವಿ ಕಿಶನ್ ತಮ್ಮ ಪುತ್ರಿಯ ಹಕ್ಕನ್ನು ನಿರಾಕರಿಸುತ್ತಿದ್ದಾರೆ ಎಂದೂ ಆಕೆ ಆರೋಪಿಸಿದ್ದರು.
ಇದರ ಬೆನ್ನಿಗೇ ಲಕ್ನೊದ ಹಝ್ರತ್ ಗಂಜ್ ಪೊಲೀಸ್ ಠಾಣೆಯಲ್ಲಿ ರವಿ ಕಿಶನ್ ಅವರ ಪತ್ನಿ ಪ್ರೀತಿ ಶುಕ್ಲಾ ದೂರು ದಾಖಲಿಸಿದ್ದಾರೆ. ಇದನ್ನು ಆಧರಿಸಿ ಅಪರ್ಣಾ ಸೋನಿ, ಆಕೆಯ ಪತಿ ರಾಜೇಶ್ ಸೋನಿ, ಪುತ್ರಿ ಶಿನೋವಾ ಸೋನಿ, ಪುತ್ರ ಸೌನಕ್ ಸೋನಿ, ಸಮಾಜವಾದಿ ಪಕ್ಷದ ನಾಯಕ ವಿವೇಕ್ ಕುಮಾರ್ ಪಾಂಡೆ ಹಾಗೂ ಯೂಟ್ಯೂಬ್ ವಾಹಿನಿಯ ಮಾಲಕರಾದ ಪತ್ರಕರ್ತ ಖುರ್ಷಿದ್ ಖಾನ್ ಸೇರಿದಂತೆ ಒಟ್ಟು ಆರು ಮಂದಿಯ ವಿರುದ್ಧ ಪೊಲೀಸರು ಎಫ್ಐಕಆರ್ ದಾಖಲಿಸಿಕೊಂಡಿದ್ದಾರೆ.
ಅವರೆಲ್ಲರ ವಿರುದ್ಧ ಭಾರತೀಯ ದಂಡ ಸಂಹಿತೆಯ ಸೆಕ್ಷನ್ ಗಳಾದ 120ಬಿ, 195, 386, 388, 504 ಹಾಗೂ 506 ಅಡಿ ಪ್ರಕರಣ ದಾಖಲಿಸಿಕೊಳ್ಳಲಾಗಿದೆ.
ತನಗೆ ಭೂಗತ ಜಗತ್ತಿನೊಂದಿಗಿರುವ ಸಂಪರ್ಕಗಳ ಕುರಿತು ಅಪರ್ಣಾ ಸೋನಿ ನನಗೆ ಬೆದರಿಕೆ ಒಡ್ಡಿದ್ದಾರೆ ಎಂದೂ ಪ್ರೀತಿ ಶುಕ್ಲಾ ತಮ್ಮ ದೂರಿನಲ್ಲಿ ಆರೋಪಿಸಿದ್ದಾರೆ.
“ಒಂದು ವೇಳೆ ನನ್ನ ಮಾತನ್ನು ಕೇಳದಿದ್ದರೆ, ನಾನು ನಿಮ್ಮ ಪತಿಯನ್ನು ಸುಳ್ಳು ಅತ್ಯಾಚಾರ ಪ್ರಕರಣದಲ್ಲಿ ಸಿಲುಕಿಸುವೆ ಎಂದು ಅಪರ್ಣಾ ಸೋನಿ ತನಗೆ ಬೆದರಿಕೆ ಒಡ್ಡಿದ್ದಾರೆ” ಎಂದೂ ಪ್ರೀತಿ ಶುಕ್ಲಾ ಆಪಾದಿಸಿದ್ದಾರೆ.
ಅಪರ್ಣಾ ಠಾಕೂರ್ ವಿರುದ್ಧ ರೂ. 20 ಕೋಟಿ ಮೊತ್ತದ ಸುಲಿಗೆ ಹಣಕ್ಕಾಗಿ ಬೇಡಿಕೆ ಇಟ್ಟ ಆರೋಪವನ್ನೂ ಎಫ್ಐಆರ್ ನಲ್ಲಿ ದಾಖಲಿಸಲಾಗಿದೆ.