ಜನತೆಯ ಭಾವನೆಯನ್ನು ಗೌರವಿಸಲು ಜಾತಿಗಣತಿ ನಡೆಸಲೇಬೇಕು: ಆಂಧ್ರ ಸಿಎಂ ಚಂದ್ರಬಾಬು ನಾಯ್ಡು

Update: 2024-10-10 12:31 GMT

ಎನ್.ಚಂದ್ರಬಾಬು ನಾಯ್ಡು | PC : PTi

ಹೊಸದಿಲ್ಲಿ: ಜನರ ಭಾವನೆಗಳನ್ನು ಗೌರವಿಸಲು ಜಾತಿಗಣತಿಯನ್ನು ನಡೆಸಬೇಕು ಎಂದು ಆಂಧ್ರಪ್ರದೇಶದ ಮುಖ್ಯಮಂತ್ರಿ ಎನ್.ಚಂದ್ರಬಾಬು ನಾಯ್ಡು ಆಗ್ರಹಿಸಿದ್ದಾರೆ.

‘ಜಾತಿಗಣತಿಯನ್ನು ನಡೆಸಲೇಬೇಕು, ಜನರಲ್ಲೊಂದು ಭಾವನೆಯಿದೆ ಮತ್ತು ಅದರಲ್ಲಿ ಯಾವುದೇ ತಪ್ಪಿಲ್ಲ. ನೀವು ಜಾತಿಗಣತಿಯನ್ನು, ಆರ್ಥಿಕ ವಿಶ್ಲೇಷಣೆಯನ್ನು ಮತ್ತು ಕೌಶಲ್ಯ ಗಣತಿಯನ್ನು ನಡೆಸಿ. ಈ ಎಲ್ಲವನ್ನೂ ಹೇಗೆ ಮಾಡಬಹುದು ಮತ್ತು ಆರ್ಥಿಕ ಅಸಮಾನತೆಗಳನ್ನು ಹೇಗೆ ತಗ್ಗಿಸಬಹುದು ಎಂಬ ಬಗ್ಗೆ ನೀವು ಯೋಚಿಸಿ’ ಎಂದು ಗುರುವಾರ The Indian Express ನಲ್ಲಿ ಪ್ರಕಟಗೊಂಡ ಸಂದರ್ಶನದಲ್ಲಿ ನಾಯ್ಡು ಹೇಳಿದ್ದಾರೆ.

ರಾಷ್ಟ್ರವ್ಯಾಪಿ ಜಾತಿಗಣತಿ ಪ್ರತಿಪಕ್ಷಗಳ ಪ್ರಮುಖ ಬೇಡಿಕೆಯಾಗಿದೆ.

ನಾಯ್ಡು ಅವರ ಟಿಡಿಪಿಯು ಬಿಜೆಪಿಯ ಮಿತ್ರಪಕ್ಷವಾಗಿದ್ದು, ಕೇಂದ್ರದ ಎನ್‌ಡಿಎ ಸರಕಾರದ ಭಾಗವಾಗಿದೆ.

ತನ್ನ ದೃಷ್ಟಿಯಲ್ಲಿ ಬಡತನವು ದೊಡ್ಡ ಸಮಸ್ಯೆಯಾಗಿದೆ ಎಂದು ನಾಯ್ಡು ಸ್ಪಷ್ಟ ಪಡಿಸಿದ್ದಾರೆ.

ಜಾತಿಗಣತಿಗಾಗಿ ಜನತೆಯ ಬೇಡಿಕೆಯನ್ನು ನೀವು ಗೌರವಿಸಬೇಕು,ಎರಡನೇ ಆಲೋಚನೆಯೇ ಇಲ್ಲ. ಇದೇ ವೇಳೆ ಬಡತನವು ದೊಡ್ಡ ಸಮಸ್ಯೆಯಾಗಿದೆ. ನೀವು ದುರ್ಬಲ ವರ್ಗಕ್ಕೆ ಸೇರಿದ್ದರೂ ನಿಮ್ಮ ಬಳಿ ಹಣವಿದ್ದರೆ ಸಮಾಜವು ನಿಮ್ಮನ್ನು ಗೌರವಿಸುತ್ತದೆ. ನೀವು ಮೇಲ್ಜಾತಿಯವರಾಗಿದ್ದು ನಿಮ್ಮ ಬಳಿ ಹಣವಿಲ್ಲದಿದ್ದರೆ ನಿಮ್ಮನ್ನು ಯಾರೂ ಗೌರವಿಸುವುದಿಲ್ಲ. ಸಮಾನತೆಯನ್ನು ತರುವಲ್ಲಿ ಹಣವು ಬಹಳ ಮುಖ್ಯ ಮತ್ತು ಅಲ್ಲಿಯೇ ನೀವು ಸಮತೋಲನವನ್ನು ಕಂಡುಕೊಳ್ಳಬೇಕು ಎಂದು ನಾಯ್ಡು ಹೇಳಿದ್ದಾರೆ.

ಬಿಜೆಪಿಯ ಮಿತ್ರಪಕ್ಷಗಳಾದ ಎಲ್‌ಜೆಪಿ(ರಾಮವಿಲಾಸ),ಜೆಡಿಯು ಮತ್ತು ಆರ್‌ಪಿಐ(ಆಠವಳೆ) ಕೂಡ ಜಾತಿಗಣತಿಯನ್ನು ಪ್ರತಿಪಾದಿಸಿವೆ. ಸೆಪ್ಟಂಬರ್‌ನಲ್ಲಿ ಬಿಜೆಪಿಯ ಮಾತೃಸಂಸ್ಥೆ ಆರೆಸ್ಸೆಸ್ ಕೂಡ ಜಾತಿಗಣತಿಗೆ ಬೆಂಬಲವನ್ನು ವ್ಯಕ್ತಪಡಿಸಿತ್ತು.

ಭಾರತದಲ್ಲಿ ಕೊನೆಯ ಬಾರಿ ಜಾತಿಗಣತಿ 1931ರಲ್ಲಿ ನಡೆದಿತ್ತು. ಸ್ವತಂತ್ರ ಭಾರತದಲ್ಲಿ ಜನಗಣತಿ ವರದಿಗಳು ಪರಿಶಿಷ್ಟ ಜಾತಿಗಳು ಮತ್ತು ಪರಿಶಿಷ್ಟ ಪಂಗಡಗಳ ಜನಸಂಖ್ಯೆಯ ಕುರಿತು ದತ್ತಾಂಶಗಳನ್ನು ಪ್ರಕಟಿಸಿವೆ,ಆದರೆ ಇತರ ಜಾತಿಗುಂಪುಗಳ ಗೋಜಿಗೆ ಹೋಗಿಲ್ಲ.

ಬಿಹಾರ ಸರಕಾರವು ಕಳೆದ ವರ್ಷ ಜಾತಿಗಣತಿಯನ್ನು ನಡೆಸಿತ್ತು.

Tags:    

Writer - ವಾರ್ತಾಭಾರತಿ

contributor

Editor - Mushaveer

contributor

Byline - ವಾರ್ತಾಭಾರತಿ

contributor

Similar News