ಭೋಪಾಲ್ ದುರಂತದ ತ್ಯಾಜ್ಯ ದಹನ ಪ್ರಕ್ರಿಯೆ; ಕೋರ್ಟ್ ಆದೇಶದ ಬಳಿಕ ಕ್ರಮ: ಮಧ್ಯಪ್ರದೇಶ ಸಿಎಂ

Update: 2025-01-05 02:48 GMT

ಮಧ್ಯಪ್ರದೇಶ ಸಿಎಂ ಮೋಹನ್ ಯಾದವ್  PC: x.com/IndianTechGuide 

ಭೋಪಾಲ್: ಭೋಪಾಲ್ ವಿಷಾನಿಲ ದುರಂತದ ತ್ಯಾಜ್ಯವನ್ನು ಪಿತಾಂಪುರದಲ್ಲಿ ದಹಿಸುವ ಕ್ರಮದ ವಿರುದ್ಧ ಪ್ರತಿಭಟನೆ ಹೆಚ್ಚುತ್ತಿರುವ ನಡುವೆಯೇ ಹೇಳಿಕೆ ನೀಡಿರುವ ಮಧ್ಯಪ್ರದೇಶ ಸಿಎಂ ಮೋಹನ್ ಯಾದವ್, "ಜನರ ಕಳಕಳಿಯನ್ನು ನ್ಯಾಯಾಲಯದ ಗಮನಕ್ಕೆ ತರಲಾಗಿದ್ದು, ನ್ಯಾಯಾಲಯದ ಆದೇಶಕ್ಕೆ ಮುನ್ನ ಯಾವುದೇ ಕ್ರಮ ಕೈಗೊಳ್ಳುವುದಿಲ್ಲ" ಎಂಬ ಭರವಸೆ ನೀಡಿದ್ದಾರೆ.

ಈ ವಿಷಯಕ್ಕೆ ಸಂಬಂಧಿಸಿದಂತೆ ಜನತೆಯ ಭಾವನೆಯ ಅರಿವು ತಮಗಿದೆ ಹಾಗೂ ಪಾರದರ್ಶಕವಾಗಿ ಇದನ್ನು ಬಗೆಹರಿಸುವುದು ಮುಖ್ಯ. ನ್ಯಾಯಾಲಯದ ಆದೇಶದಂತೆ ಇಂಧೋರ್ ಸಮೀಪದ ಪಿತಾಂಪುರಕ್ಕೆ ತ್ಯಾಜ್ಯವನ್ನು ಸಾಗಿಸಲಾಗಿದೆ ಎಂದು ಸ್ಪಷ್ಟಪಡಿಸಿದ್ದಾರೆ. "ಯಾವುದೇ ಭದ್ರತಾ ಕಳಕಳಿಯ ಬಗ್ಗೆ ಅಥವಾ ಜನತೆಯಲ್ಲಿ ಇರುವ ಭೀತಿಯ ಬಗ್ಗೆ ಸರ್ಕಾರ ನ್ಯಾಯಾಲಯದ ಗಮನಕ್ಕೆ ತರಲಿದೆ. ನ್ಯಾಯಾಲಯ ಸ್ಪಷ್ಟ ನಿರ್ದೇಶನ ನೀಡುವವರೆಗೆ ಯಾವುದೇ ಮುಂದಿನ ಕ್ರಮ ಕೈಗೊಳ್ಳುವುದಿಲ್ಲ. ನ್ಯಾಯಾಲಯದ ಆದೇಶವನ್ನು ಪಾಲಿಸಲು ಸರ್ಕಾರ ಬದ್ಧ. ನ್ಯಾಯಾಲಯದ ನಿರ್ದೇಶನದ ಅನ್ವಯವೇ ಸರ್ಕಾರ ಮುಂದಿನ ಕ್ರಮ ಕೈಗೊಳ್ಳಲಿದೆ" ಎಂದು ವಿವರಿಸಿದ್ದಾರೆ.

ಶುಕ್ರವಾರ ಇಂಧೋರ್ ಸಮೀಪದ ಕೈಗಾರಿಕಾ ಉಪನಗರದಲ್ಲಿ ಪೊಲೀಸರ ಜತೆ ಪ್ರತಿಭಟನಾಕಾರರು ಸಂಘರ್ಷಕ್ಕೆ ಇಳಿದಿದ್ದರು. ಆತ್ಮಾಹುತಿಗೆ ಯತ್ನಿಸಿದ ಇಬ್ಬರು ಸುಟ್ಟಗಾಯಗಳೊಂದಿಗೆ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. 1984ರ ದುರಂತ ತ್ಯಾಜ್ಯ ವಿಲೇವಾರಿಗಾಗಿ ಹೈಕೋರ್ಟ್ ನಲ್ಲಿ ಮತ್ತಷ್ಟು ಸಮಯಾವಕಾಶ ಕೇಳುವುದಾಗಿ ಸರ್ಕಾರ ಪ್ರಕಟಿಸಿದೆ.

ಈ ಸಂಬಂಧ ಹೈಕೋರ್ಟ್ ನಲ್ಲಿ ಅಫಿಡವಿಟ್ ಸಲ್ಲಿಸಲಾಗುವುದು. ಸಾರ್ವಜನಿಕರನ್ನು ವಿಶ್ವಾಸಕ್ಕೆ ತೆಗೆದುಕೊಳ್ಳದೇ ಯಾವುದೇ ಕ್ರಮ ಮುಂದುವರಿಸುವುದಿಲ್ಲ ಎಂದು ರಾಜ್ಯದ ಮುಖ್ಯ ಕಾರ್ಯದರ್ಶಿ ಅನುರಾಗ್ ಜೈನ್ ಶನಿವಾರ ಹೇಳಿಕೆ ನೀಡಿದ್ದಾರೆ. ಸುಪ್ರೀಂಕೋರ್ಟ್ ಮಾರ್ಗಸೂಚಿ ಅನ್ವಯವೇ ಪ್ರತಿಯೊಂದೂ ನಡೆಯುತ್ತಿದೆ ಎಂಬ ಸ್ಪಷ್ಟನೆ ನೀಡಿದ್ದಾರೆ.

Tags:    

Writer - ವಾರ್ತಾಭಾರತಿ

contributor

Editor - jafar sadik

contributor

Byline - ವಾರ್ತಾಭಾರತಿ

contributor

Similar News