ದಿಲ್ಲಿ-ಎನ್ಸಿಆರ್ ಅನ್ನು ಆವರಿಸಿದ ದಟ್ಟ ಮಂಜು: 160ಕ್ಕೂ ಹೆಚ್ಚು ವಿಮಾನಗಳ ಹಾರಾಟದಲ್ಲಿ ವ್ಯತ್ಯಯ
ಹೊಸದಿಲ್ಲಿ: ಇಂದು ಬೆಳಗ್ಗೆ ಕೂಡಾ ದಿಲ್ಲಿ-ಎನ್ಸಿಆರ್ ಪ್ರದೇಶದಲ್ಲಿ ದಟ್ಟ ಮಂಜಿನ ವಾತಾವರಣ ಮುಂದುವರಿದಿದ್ದು, ಗೋಚರತೆ ಪ್ರಮಾಣ ತಗ್ಗಿರುವುದರಿಂದ, ವಿಮಾನಗಳು ಹಾಗೂ ರೈಲುಗಳ ಕಾರ್ಯಾಚರಣೆ ಮೇಲೆ ಸತತ ಮೂರನೆಯ ದಿನವೂ ಪ್ರತಿಕೂಲ ಪರಿಣಾಮವುಂಟಾಗಿದೆ.
ಇಂದಿರಾ ಗಾಂಧಿ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಿಂದ ಕಾರ್ಯಾಚರಣೆ ನಡೆಸಬೇಕಿದ್ದ 160ಕ್ಕೂ ವಿಮಾನಗಳ ಹಾರಾಟ ವ್ಯತ್ಯಯಗೊಂಡಿದ್ದು, ಸುಧಾರಿತ ಸಿಎಟಿ III ನ್ಯಾವಿಗೇಶನ್ ವ್ಯವಸ್ಥೆಯನ್ನು ಅಳವಡಿಸಿಕೊಂಡಿರದ 155ಕ್ಕೂ ಹೆಚ್ಚು ವಿಮಾನಗಳ ಹಾರಾಟ ವಿಳಂಬಗೊಂಡಿದೆ ಎಂದು ವರದಿಯಾಗಿದೆ. ಇಲ್ಲಿಯವರೆಗೆ ಕನಿಷ್ಠ 8 ವಿಮಾನಗಳ ಹಾರಾಟವನ್ನು ರದ್ದುಗೊಳಿಸಲಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಇಂದಿರಾ ಗಾಂಧಿ ವಿಮಾನ ನಿಲ್ದಾಣದಲ್ಲಿನ ಸಾಮಾನ್ಯ ಗೋಚರತೆ ಪ್ರಮಾಣವು ಬೆಳಗ್ಗೆ 7.30ರ ವೇಳೆಗೆ ಶೂನ್ಯವಿತ್ತು ಎಂದು ಹೇಳಲಾಗಿದೆ.
ಇಂದು ಬೆಳಗ್ಗೆ ಸುಮಾರು 7 ಗಂಟೆಗೆ ಪ್ರಕಟಣೆಯನ್ನು ಬಿಡುಗಡೆಗೊಳಿಸಿರುವ ದಿಲ್ಲಿ ಅಂತಾರಾಷ್ಟ್ರೀಯ ವಿಮಾ ನಿಲ್ದಾಣ ಲಿಮಿಟೆಡ್, ಆಗಮನ ಮತ್ತು ನಿರ್ಗಮನ ಮುಂದುವರಿದಿದೆ ಎಂದು ಪ್ರಯಾಣಿಕರಿಗೆ ಭರವಸೆ ನೀಡಿದ್ದು, ಸಿಎಟಿ III ವ್ಯವಸ್ಥೆ ಅಳವಡಿಸಿಕೊಂಡಿರದ ವಿಮಾನಗಳ ಹಾರಾಟದಲ್ಲಿ ವಿಳಂಬವಾಗುವ ಸಾಧ್ಯತೆ ಇದೆ ಎಂದು ಮುನ್ನೆಚ್ಚರಿಕೆ ನೀಡಿದೆ.