10, 12ನೇ ತರಗತಿಯ ಸಿಬಿಎಸ್‌ಇ ಪರೀಕ್ಷಾ ಕೇಂದ್ರಗಳಲ್ಲಿ ಸಿಸಿಟಿವಿ ಕಡ್ಡಾಯ

Update: 2024-09-28 15:27 GMT

ಸಾಂದರ್ಭಿಕ ಚಿತ್ರ | PC : PTI

ಹೊಸದಿಲ್ಲಿ :ಕೇಂದ್ರೀಯ ಮಾಧ್ಯಮಿಕ ಶಿಕ್ಷಣ ಮಂಡಳಿ (ಸಿಬಿಎಸ್‌ಇ) ತಾನು ಆುಜಿಸುವ 10ನೇ ಹಾಗೂ 12 ತರಗತಿಯ ಪರೀಕ್ಷೆಗಳು ನಡೆಯುವ ಶಾಲೆಗಳಲ್ಲಿ ಸಿಸಿಟಿವಿಗಳನ್ನು ಅಳವಡಿಸುವುದನ್ನು ಕಡ್ಡಾಯಗೊಳಿಸಿದೆ. 2025ರಲ್ಲಿ ಸಿಬಿಎಸ್‌ಇ ಆಯೋಜಿಸಲಿರುವ 10 ಹಾಗೂ 12ನೇ ತರಗತಿಯ ಪರೀಕ್ಷೆಗಳಿಗೆ ಸುಮಾರು 44 ಲಕ್ಷ ವಿದ್ಯಾರ್ಥಿಗಳು ಹಾಜರಾಗುವ ನಿರೀಕ್ಷೆಯಿದ್ದು, ಸುಮಾರು 8 ಸಾವಿರ ಶಾಲೆಗಳಲ್ಲಿ ಪರೀಕ್ಷೆಗಳು ನಡೆಯಲಿವೆ.

ಸಿಸಿಟಿವಿ ಸೌಲಭ್ಯದ ಕೊರತೆಯಿರುವ ಯಾವುದೇ ಶಾಲೆಯನ್ನು ಪರೀಕ್ಷಾ ಕೇಂದ್ರವಾಗಿ ನಿಯೋಜಿಸಲಾಗುವುದಿಲ್ಲವೆಂದು ಸಿಬಿಎಸ್‌ಇ, ತನಗೆ ಸಂಯೋಜಿತವಾಗಿರುವ ಎಲ್ಲಾ ಶಾಲೆಗಳಿಗೆ ನೀಡಿರುವ ನಿರ್ದೇಶನ ಪತ್ರದಲ್ಲಿ ತಿಳಿಸಿದೆ. ಪರೀಕ್ಷೆಯಲ್ಲಿ ಅಕ್ರಮಗಳು ನಡೆಯುವುದನ್ನು ತಡೆಗಟ್ಟಲು ಹಾಗೂ ಕಣ್ಗಾವಲು ಸಾಮರ್ಥ್ಯವನ್ನು ಹೆಚ್ಚಿಸಲು ಮತ್ತು ಸುಗಮ, ನ್ಯಾಯಯುತ ಪರೀಕ್ಷಾ ಪ್ರಕ್ರಿಯೆಯನ್ನು ಖಾತರಿಪಡಿಸುವ ಉದ್ದೇಶದಿಂದ ನೂತನ ಸಿಸಿಟಿಟಿ ನೀತಿಯನ್ನು ಜಾರಿಗೊಳಿಸಲಾಗಿದೆಯೆಂದು ಅದು ಹೇಳಿದೆ.

ಶಿಕ್ಷಣ ಕ್ಷೇತ್ರದಲ್ಲಿ ಪ್ರಾಮಾಣಿಕತೆಯನ್ನು ಎತ್ತಿಹಿಡಿಯುವ ಹಾಗೂ 2020ನೇ ಸಾಲಿನ ರಾಷ್ಟ್ರೀಯ ಶಿಕ್ಷಣ ನೀತಿಯ ಉದ್ದೇಶಗಳನ್ನು ಈಡೇರಿಸುವಲ್ಲಿ ಸಿಬಿಎಸ್‌ಇನ ಬದ್ಧತೆಗೆ ಅನುಗುಣವಾಗಿ ಈ ಉಪಕ್ರಮವನ್ನು ಕೈಗೊಳ್ಳಲಾಗಿದೆ ಎಂದು ನಿರ್ದೇಶನಾಪತ್ರದಲ್ಲಿ ತಿಳಿಸಿದೆ. ಇದರ ಜೊತೆಗೆ ವಿದ್ಯಾರ್ಥಿಗಳ ಭಾವನಾತ್ಮಕ ಹಾಗೂ ಮಾನಸಿಕ ಕ್ಷೇಮಕ್ಕೆ ಪೂರಕವಾದ ಕಾರ್ಯತಂತ್ರಗಳನ್ನು ರೂಪಿಸಲು ಸಿಬಿಎಸ್‌ಇ ಶಾಲೆಗಳ 150 ಪ್ರಾಂಶುಪಾಲರುಗಳಿಗೆ ಹೊಸದಿಲ್ಲಿಯ ಸರ್ದಾರ್ ಪಟೇಲ್ ವಿದ್ಯಾಲಯದಲ್ಲಿ ಕಾರ್ಯಾಗಾರವೊಂದನ್ನು ಇತ್ತೀಚೆಗೆ ಆಯೋಜಿಸಲಾಗಿತ್ತು.

►ಸಿಬಿಎಸ್‌ಇ ಪ್ರಕಟಿಸಿರುವ ಮಾರ್ಗದರ್ಶಿ ಸೂತ್ರಗಳು ಹೀಗಿವೆ.

ಸಿಸಿಟಿವಿ ಅಳವಡಿಕೆ ಹಾಗೂ ಕಾರ್ಯನಿರ್ವಹಣೆ: ಶಾಲೆಗಳು ಪರೀಕ್ಷೆ ನಡೆಯುವ ಪ್ರದೇಶದ ವ್ಯಾಪ್ತಿಯಲ್ಲಿ ಸಿಸಿಟಿವಿಗಳನ್ನು ಸ್ಥಾಪಿಸಬೇಕು. ಪರೀಕ್ಷಾ ಅವಧಿಯುದ್ದಕ್ಕೂ ನಿರಂತರವಾಗಿ ಹೈರೆಸೊಲ್ಯೂಶನ್‌ನೊಂದಿಗೆ ರೆಕಾರ್ಡಿಂಗ್ ನಡೆಸಬೇಕು.

ಗೋಪ್ಯತೆ ಪಾಲನೆ: ಸಿಸಿಟಿವಿ ಸ್ಥಾಪನೆಯ ಕುರಿತು ವಿದ್ಯಾರ್ಥಿಗಳು ಹಾಗೂ ಸಿಬ್ಬಂದಿಗೆ ಮಾಹಿತಿ ನೀಡಬೇಕಾಗುತ್ತದೆ. ವಿಡಿಯೋ ರೆಕಾರ್ಡಿಂಗ್‌ನ ಗೋಪ್ಯತೆಯನ್ನು ರಕ್ಷಿಸಲು ಸೂಕ್ತ ಕ್ರಮಗಳನ್ನು ಕೈಗೊಳ್ಳಬೇಕು. ಸಂಬಂಧಪಟ್ಟ ಸಿಬ್ಬಂದಿಗೆ ಮಾತ್ರವೇ ಸಿಸಿಟಿವಿ ದೃಶ್ಯಾವಳಿ ಲಭ್ಯವಾಗುವಂತಿರಬೇಕು. ರೆಕಾರ್ಡ್ ಮಾಡಲಾದ ವೀಡಿಯೊವನ್ನು ಫಲಿತಾಂಶಗಳು ಘೋಷಣೆಯಾದ ಆನಂತರವೂ ಎರಡು ತಿಂಗಳುಗಳವರೆಗೆ ಉಳಿಸಿಕೊಳ್ಳಬೇಕು.

ಕಣ್ಗಾವಲು ಶಿಷ್ಟಾಚಾರ: ಪ್ರತಿ ಹತ್ತು ಪರೀಕ್ಷಾ ಕೊಠಡಿಗಳಿಗೆ ಅಥವಲಾ 240 ವಿದ್ಯಾರ್ಥಿಗಳಿಗೆ ಓರ್ವ ಜವಾಬ್ದಾರಿಯುತ ವ್ಯಕ್ತಿಯನ್ನು ನಿಗಾವಣೆಗಾಗಿ ನಿಯೋಜಿಸಬೇಕು.

Tags:    

Writer - ವಾರ್ತಾಭಾರತಿ

contributor

Editor - Ismail

contributor

Byline - ವಾರ್ತಾಭಾರತಿ

contributor

Similar News