ಕೋಲ್ಡ್‌ಪ್ಲೇ ಟಿಕೆಟ್ ವಿವಾದ | ‘ಬುಕ್ ಮೈ ಶೋ’ ಸಿಇಒಗೆ ಸಮನ್ಸ್

Update: 2024-09-28 15:32 GMT

 ಆಶಿಶ್ ಹೇಮರಜನಿ |  PC : X  

ಮುಂಬೈ : ಬ್ರಿಟೀಷ್ ಬ್ಯಾಂಡ್ ಕೋಲ್ಡ್‌ಪ್ಲೇಯ ಸಂಗೀತ ಕಾರ್ಯಕ್ರಮದ ಟಿಕೆಟ್ ಮಾರಾಟಕ್ಕೆ ಸಂಬಂಧಿಸಿ ಟಿಕೆಟ್ ಮಾರಾಟ ವೇದಿಕೆ ‘ಬುಕ್ ಮೈ ಶೋ’ನ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಆಶಿಶ್ ಹೇಮರಜನಿ ಅವರಿಗೆ ಮುಂಬೈ ಪೊಲೀಸ್‌ನ ಆರ್ಥಿಕ ಅಪರಾಧ ದಳ ಸಮನ್ಸ್ ನೀಡಿದೆ.

‘ಬುಕ್ ಮೈ ಶೋ’ನ ತಾಂತ್ರಿಕ ಮುಖ್ಯಸ್ಥನಿಗೆ ಕೂಡ ಪೊಲೀಸರು ಸಮನ್ಸ್ ನೀಡಿದ್ದಾರೆ.

ಬ್ರಿಟೀಷ್ ಬ್ಯಾಂಡ್ ನವಿ ಮುಂಬೈಯ ಡಿವೈ ಪಾಟಿಲ್ ಕ್ರೀಡಾಂಗಣದಲ್ಲಿ ಜನವರಿ 18, 19 ಹಾಗೂ 21ರಂದು ಸಂಗೀತ ಕಾರ್ಯಕ್ರಮ ಆಯೋಜಿಸಿತ್ತು. ಈ ಕಾರ್ಯಕ್ರಮದ ಟಿಕೆಟ್ ‘ಬುಕ್ ಮೈ ಶೋ’ನಲ್ಲಿ ಸೆಪ್ಟೆಂಬರ್ 22ರಂದು ವಿಶೇಷವಾಗಿ ಮಾರಾಟವಾಗಿತ್ತು.

ನಿಮಿಷಗಳ ಒಳಗೆ ಟಿಕೆಟ್ ಖಾಲಿಯಾಗಿತ್ತು. ಕೂಡಲೇ ಇತರ ಕೆಲವು ಟಿಕೆಟ್ ಮಾರಾಟ ವೇದಿಕೆಗಳು ಹಾಗೂ ಕೆಲವು ವ್ಯಕ್ತಿಗಳು ಟಿಕೆಟ್ ಅನ್ನು ಹೆಚ್ಚಿನ ಬೆಲೆಗೆ ಮರು ಮಾರಾಟ ಮಾಡಿದ್ದರು.

ಈ ಹಿನ್ನೆಲೆಯಲ್ಲಿ ವಕೀಲ ಅಮಿತ್ ವ್ಯಾಸ್ ಎಂಬವರು ಟಿಕೆಟುಗಳ ಕಾಳಸಂತೆಗೆ ‘ಬುಕ್ ಮೈ ಶೋ’ ಪ್ರೋತ್ಸಾಹಿಸುತ್ತಿದೆ ಎಂದು ಆರೋಪಿಸಿ ದೂರು ದಾಖಲಿಸಿದ್ದರು. ದೂರಿನಲ್ಲಿ, 2,500 ರೂ. ಟಿಕೆಟ್ ಅನ್ನು 3 ಲಕ್ಷಕ್ಕೆ ಮರು ಮಾರಾಟ ಮಾಡಲಾಗಿದೆ. ಆದುದರಿಂದ ಈ ವಂಚನೆಯ ಕುರಿತು ಪ್ರಥಮ ಮಾಹಿತಿ ವರದಿ ದಾಖಲಿಸುವಂತೆ ಕೋರಿದ್ದರು.

ಟಿಕೆಟ್‌ಗಳ ಅನಧಿಕೃತ ಮರು ಮಾರಾಟದ ಬಗ್ಗೆ ಪ್ರಾಥಮಿಕ ತನಿಖೆ ಆರಂಭಿಸಲಾಗಿದೆ. ವ್ಯಾಸ್ ಅವರ ಹೇಳಿಕೆಯನ್ನು ದಾಖಲಿಸಿಕೊಳ್ಳಲಾಗಿದೆ. ಟಿಕೆಟ್‌ಗಳ ಮರು ಮಾರಾಟದ ಆರೋಪದಲ್ಲಿ ಭಾಗಿಯಾಗಿರುವ ಹಲವು ಮಧ್ಯಸ್ಥಿಗೆಗಾರರೊಂದಿಗೆ ಮಾತುಕತೆ ನಡೆಸಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.

ಮಹಾರಾಷ್ಟ್ರ ಮನೋರಂಜನೆ ಕಾಯ್ದೆ ಪ್ರಕಾರ ರಾಜ್ಯದಲ್ಲಿ ಟಿಕೆಟ್ ಅನ್ನು ಹೆಚ್ಚಿನ ಬೆಲೆಗೆ ಮರು ಮಾರಾಟ ಮಾಡುವಂತಿಲ್ಲ.

Tags:    

Writer - ವಾರ್ತಾಭಾರತಿ

contributor

Editor - Ismail

contributor

Byline - ವಾರ್ತಾಭಾರತಿ

contributor

Similar News