ತಿರುಪತಿ ಲಡ್ಡು ವಿವಾದ | ಅಯೋಧ್ಯೆ ರಾಮಮಂದಿರ ಪ್ರಸಾದದ ಸ್ಯಾಂಪಲ್‌ಗಳು ಪರೀಕ್ಷೆಗೆ ರವಾನೆ

Update: 2024-09-28 15:21 GMT

PC ; PTI

ಅಯೋಧ್ಯೆ: ಆಹಾರ ಸುರಕ್ಷತೆ ಮತ್ತು ಔಷಧಿ ಆಡಳಿತ ಇಲಾಖೆಯು ಇಲ್ಲಿಯ ರಾಮ ಜನ್ಮಭೂಮಿ ಮಂದಿರದಲ್ಲಿ ಪ್ರಸಾದದ ರೂಪದಲ್ಲಿ ವಿತರಿಸಲಾಗುವ ಏಲಕ್ಕಿ ಬೀಜಗಳ ಸ್ಯಾಂಪಲ್‌ಗಳನ್ನು ಶುಕ್ರವಾರ ಸಂಗ್ರಹಿಸಿದ್ದು, ಅವುಗಳನ್ನು ಪರೀಕ್ಷೆಗಾಗಿ ರವಾನಿಸಿದೆ.

ಸಂಯೋಜಿತ ಕುಂದುಕೊರತೆ ಪರಿಹಾರ ವ್ಯವಸ್ಥೆ (ಐಜಿಆರ್‌ಎಸ್)ಯ ಮೂಲಕ ದಾಖಲಾದ ದೂರಿನ ಮೇರೆಗೆ ಈ ಕ್ರಮವನ್ನು ತೆಗೆದುಕೊಳ್ಳಲಾಗಿದೆ. ಏಲಕ್ಕಿ ಬೀಜ ಪ್ರಸಾದಗಳನ್ನು ತಯಾರಿಸಲಾಗುವ ಹೈದರ್‌ಗಂಜ್‌ನಿಂದ ಸ್ಯಾಂಪಲ್‌ಗಳನ್ನು ಸಂಗ್ರಹಿಸಲಾಗಿದ್ದು, ಸಮಗ್ರ ಪರೀಕ್ಷೆ ಮತ್ತು ಮೌಲ್ಯಮಾಪನಕ್ಕಾಗಿ ಝಾನ್ಸಿಯ ಸರಕಾರಿ ಪ್ರಯೋಗಾಲಯಕ್ಕೆ ಕಳುಹಿಸಲಾಗಿದೆ ಎಂದು ಸಹಾಯಕ ಆಹಾರ ಆಯುಕ್ತ ಮಾಣಿಕಚಂದ್ ಸಿಂಗ್ ತಿಳಿಸಿದರು.

ಪ್ರತಿ ದಿನ ಪ್ರಸಾದದ ರೂಪದಲ್ಲಿ ಏಲಕ್ಕಿ ಬೀಜಗಳ ಸುಮಾರು 80,000 ಪ್ಯಾಕೆಟ್‌ಗಳನ್ನು ಭಕ್ತರಿಗೆ ವಿತರಿಸಲಾಗುತ್ತಿದೆ ಎಂದು ರಾಮ ಮಂದಿರ ಟ್ರಸ್ಟ್‌ನ ಉಸ್ತುವಾರಿ ಅಧಿಕಾರಿ ಪ್ರಕಾಶ್ ಗುಪ್ತಾ ಹೇಳಿದರು.

ಆಂಧ್ರಪ್ರದೇಶದ ತಿರುಪತಿ ದೇವಸ್ಥಾನದ ಲಡ್ಡು ಪ್ರಸಾದದಲ್ಲಿ ಪ್ರಾಣಿಗಳ ಕೊಬ್ಬು ಮಿಶ್ರಿತ ತುಪ್ಪವನ್ನು ಬಳಸಲಾಗಿದೆ ಎಂಬ ಆರೋಪಗಳ ನಡುವೆಯೇ ದೇಶವ್ಯಾಪಿ ಮಾರಾಟವಾಗುವ ತುಪ್ಪದ ಶುದ್ಧತೆಯನ್ನು ಗುರುವಾರ ಪ್ರಶ್ನಿಸಿದ್ದ ಇಲ್ಲಿಯ ರಾಮ ಮಂದಿರದ ಮುಖ್ಯ ಅರ್ಚಕರು, ಪ್ರಸಾದಗಳನ್ನು ದೇವಸ್ಥಾನದ ಅರ್ಚಕರ ಮೇಲ್ವಿಚಾರಣೆಯಡಿ ಮಾತ್ರ ತಯಾರಿಸಬೇಕು ಎಂದು ಹೇಳಿದ್ದರು.

Tags:    

Writer - ವಾರ್ತಾಭಾರತಿ

contributor

Editor - Ismail

contributor

Byline - ವಾರ್ತಾಭಾರತಿ

contributor

Similar News