ಅಸ್ಸಾಂ | ಮನೆ ಧ್ವಂಸ ಕಾರ್ಯಾಚರಣೆ ವಿರುದ್ಧ ಸುಪ್ರೀಂ ಕೋರ್ಟ್‌ನಲ್ಲಿ ನ್ಯಾಯಾಂಗ ನಿಂದನೆ ಅರ್ಜಿ

Update: 2024-09-28 16:15 GMT

ಸುಪ್ರೀಂ ಕೋರ್ಟ್‌ | PC : PTI 

ಹೊಸದಿಲ್ಲಿ: ತಮ್ಮ ಮನೆಗಳ ನೆಲಸಮ ಕಾರ್ಯವನ್ನು ನಿಲ್ಲಿಸುವಂತೆ ಕೋರಿ ಅಸ್ಸಾಮಿನ ಕಾಮರೂಪ ಮಹಾನಗರ ಜಿಲ್ಲೆಯ ಕಚುತಾಲಿ ಗ್ರಾಮದ 48 ನಿವಾಸಿಗಳು ಸರ್ವೋಚ್ಚ ನ್ಯಾಯಾಲಯದಲ್ಲಿ ನ್ಯಾಯಾಂಗ ನಿಂದನೆ ಅರ್ಜಿಯನ್ನು ಸಲ್ಲಿಸಿದ್ದಾರೆ.

ತಮ್ಮ ಮನೆಗಳನ್ನು ನೆಲಸಮಗೊಳಿಸುವ ಜಿಲ್ಲಾಡಳಿತದ ಯೋಜನೆಯು ದೇಶಾದ್ಯಂತ ಆಸ್ತಿ ಧ್ವಂಸಕ್ಕೆ ಅ.1ರವರೆಗೆ ತಡೆಯನ್ನು ನೀಡಿರುವ ಸರ್ವೋಚ್ಚ ನ್ಯಾಯಾಲಯದ ಸೆ.17 ಆದೇಶವನ್ನು ಉಲ್ಲಂಘಿಸುತ್ತದೆ ಎಂದು ಅರ್ಜಿದಾರರು ಹೇಳಿದ್ದಾರೆ.

ಕ್ರಿಮಿನಲ್ ಪ್ರಕರಣಗಳ ಆರೋಪಿಗಳ ಆಸ್ತಿಗಳನ್ನು ನೆಲಸಮಗೊಳಿಸಲು ವಿವಿಧ ರಾಜ್ಯ ಸರಕಾರಗಳಿಂದ ಬುಲ್ಡೋಜರ್ ಕಾರ್ಯಾಚರಣೆಯನ್ನು ಪ್ರಶ್ನಿಸಿ ಸಲ್ಲಿಸಲಾಗಿರುವ ಅರ್ಜಿಗಳಿಗೆ ಸಂಬಂಧಿಸಿದಂತೆ ಸರ್ವೋಚ್ಚ ನ್ಯಾಯಾಲಯವು ಈ ಆದೇಶವನ್ನು ಹೊರಡಿಸಿತ್ತು.

ಕಳೆದ ಕೆಲವು ವಾರಗಳಲ್ಲಿ ಕಾಮರೂಪ ಮಹಾನಗರ ಜಿಲ್ಲೆಯ ಸೋನಾಪುರ ಪ್ರದೇಶದಲ್ಲಿ ತೆರವು ಕಾರ್ಯಾಚರಣೆ ನಡೆಸಲಾಗುತ್ತಿದ್ದು,ಸುಮಾರು 500 ಮನೆಗಳನ್ನು ಈಗಾಗಲೇ ಧ್ವಂಸಗೊಳಿಸಲಾಗಿದೆ ಮತ್ತು ಹಲವಾರು ಮನೆಗಳನ್ನು ನೆಲಸಮಗೊಳಿಸಲು ಗುರುತಿಸಲಾಗಿದೆ.

ಸೆ.13ರಂದು ತಮ್ಮ ಮನೆಗಳಿಗೆ ಶೀಘ್ರವೇ ನೆಲಸಮಗೊಳಿಸುವ ಸೂಚನೆಯಾಗಿ ಕೆಂಪು ಸ್ಟಿಕರ್‌ಗಳನ್ನು ಅಂಟಿಸಲಾಗಿದೆ. ತೆರವು ನೋಟಿಸ್‌ಗಳ ಬಗ್ಗೆ ತಮಗೆ ಯಾವುದೇ ಪೂರ್ವ ಮಾಹಿತಿಯನ್ನು ನೀಡಲಾಗಿಲ್ಲ ಎಂದು ಅರ್ಜಿದಾರರು ವಾದಿಸಿದ್ದಾರೆ.

ಇವು ಪರಿಶಿಷ್ಟ ಪಂಗಡಗಳ ಸಮುದಾಯದ ಸದಸ್ಯರ ಬಳಕೆಗೆ ಮೀಸಲಾಗಿರುವ ನಿವೇಶನಗಳಲ್ಲಿ ಅನಧಿಕೃತ ನಿರ್ಮಾಣಗಳಾಗಿವೆ ಎಂದು ಜಿಲ್ಲಾಡಳಿತವು ಹೊರಡಿಸಿರುವ ತೆರವು ನೋಟಿಸ್‌ಗಳಲ್ಲಿ ಆರೋಪಿಸಿದೆ. ಆದರೆ ಇದನ್ನು ಪರಿಶಿಷ್ಟ ಪಂಗಡಕ್ಕೆ ಮೀಸಲಿರಿಸಿ 1950ರಲ್ಲಿ ಆದೇಶಿಸಿದ್ದು, ತಾವು 1920ರ ದಶಕದಿಂದಲೂ ಇಲ್ಲಿ ವಾಸವಾಗಿದ್ದೇವೆ ಎಂದು ನಿವಾಸಿಗಳು ವಾದಿಸಿದ್ದಾರೆ.

Tags:    

Writer - ವಾರ್ತಾಭಾರತಿ

contributor

Editor - Ismail

contributor

Byline - ವಾರ್ತಾಭಾರತಿ

contributor

Similar News