ಹರ್ಯಾಣ: ಪಟಾಕಿ ಕಾರ್ಖಾನೆಯಲ್ಲಿ ಸ್ಫೋಟ
ಚಂಡಿಗಢ : ಹರ್ಯಾಣದ ಸೋನಿಪತ್ ಜಿಲ್ಲೆಯ ಅಕ್ರಮ ಪಟಾಕಿ ಕಾರ್ಖಾನೆಯಲ್ಲಿ ಶನಿವಾರ ಸಂಭವಿಸಿದ ಸ್ಫೋಟದಿಂದ ಕನಿಷ್ಠ ಮೂವರು ಸಾವನ್ನಪ್ಪಿದ್ದಾರೆ ಹಾಗೂ ಇತರ 7 ಮಂದಿ ಗಾಯಗೊಂಡಿದ್ದಾರೆ.
ಮೃತಪಟ್ಟ ಮೂವರ ಮೃತದೇಹಗಳು ಸುಟ್ಟು ಕರಕಲಾಗಿವೆ. ಗಾಯಗೊಂಡ 7 ಮಂದಿಯ ಸ್ಥಿತಿ ಚಿಂತಾಜನಕವಾಗಿದೆ.
ವೇದ್ ಹೆಸರಿನ ಸ್ಥಳೀಯ ನಿವಾಸಿ ತನ್ನ ಮನೆಯಲ್ಲೇ ಪಟಾಕಿ ಕಾರ್ಖಾನೆಯನ್ನು ಅಕ್ರಮವಾಗಿ ನಡೆಸುತ್ತಿದ್ದ. ಈ ಅಕ್ರಮ ಘಟಕದಲ್ಲಿ ಪಟಾಕಿಗಳನ್ನು ಸಿದ್ಧಪಡಿಸಲು ಬಳಸುತ್ತಿದ್ದ ರಾಸಾಯನಿಕಗಳಿಗೆ ಬೆಂಕಿ ಹತ್ತಿಕೊಂಡಿದೆ. ಇದರಿಂದ ಸ್ಫೋಟ ಸಂಭವಿಸಿರುವ ಸಾಧ್ಯತೆ ಇದೆ ಎಂದು ಪೊಲೀಸ್ ಅಧಿಕಾರಿ ತಿಳಿಸಿದ್ದಾರೆ.
ಘಟನೆಯ ಕುರಿತು ಮಾಹಿತಿ ಸ್ವೀಕರಿಸುತ್ತಿದ್ದಂತೆ ಅಗ್ನಿ ಶಾಮಕ ದಳ, ಹಿರಿಯ ಪೊಲೀಸ್ ಅಧಿಕಾರಿಗಳು ಹಾಗೂ ವಿಧಿವಿಜ್ಞಾನ ತಂಡ ಸ್ಥಳಕ್ಕೆ ಧಾವಿಸಿತು. ಕಾರ್ಖಾನೆಯಿಂದ ಮೃತದೇಹಗಳನ್ನು ಪತ್ತೆ ಮಾಡಲು ಪೊಲೀಸರು ಹಾಗೂ ಅಗ್ನಿಶಾಮಕ ದಳದ ಸಿಬ್ಬಂದಿ ಜಂಟಿಯಾಗಿ ಕಾರ್ಯ ನಿರ್ವಹಿಸಿದರು.
ಈ ಅಕ್ರಮ ಕಾರ್ಖಾನೆ ನಡೆಸುತ್ತಿದ್ದ ಮಾಲಿಕ ವೇದ್ ನಾಪತ್ತೆಯಾಗಿದ್ದಾನೆ. ಘಟನೆಯ ಕುರಿತು ಸೋನಿಪತ್ ಪೊಲೀಸರು ತನಿಖೆ ಆರಂಭಿಸಿದ್ದಾರೆ.