ಬಾಸ್ಮತಿಯೇತರ ಬಿಳಿ ಅಕ್ಕಿ ಮೇಲಿನ ರಫ್ತು ನಿಷೇಧ ರದ್ದು ಪಡಿಸಿದ ಕೇಂದ್ರ ಸರಕಾರ

Update: 2024-09-28 17:00 GMT

ಸಾಂದರ್ಭಿಕ ಚಿತ್ರ

ಕೋಲ್ಕತಾ : ಕೇಂದ್ರ ಸರಕಾರವು ಬಾಸ್ಮತಿಯೇತರ ಬಿಳಿ ಅಕ್ಕಿಯ ರಫ್ತಿಗೆ ವಿಧಿಸಿದ್ದ ನಿಷೇಧವನ್ನು ರದ್ದುಪಡಿಸಿ ಆದೇಶ ಹೊರಡಿಸಿದೆ. ಈ ಆದೇಶವು ಶುಕ್ರವಾರದಿಂದ ತಕ್ಷಣವೇ ಜಾರಿಗೆ ಬಂದಿದೆ ಎಂದು ಅಧಿಸೂಚನೆ ತಿಳಿಸಿದೆ.

ದೇಶದೊಳಗೆ ಅಕ್ಕಿಯ ಪೂರೈಕೆಯನ್ನು ಖಾತರಿಪಡಿಸಲು ಹಾಗೂ ಬೆಲೆಗನ್ನು ನಿಯಂತ್ರಿಸುವ ಉದ್ದೇಶದಿಂದ ಕೇಂದ್ರ ಸರಕಾರವು 2023ರ ಜುಲೈನಲ್ಲಿ ಬಾಸ್ಮಿಯೇತರ ಬಿಳಿ ಅಕ್ಕಿಯ ರಫ್ತಿನ ಮೇಲೆ ನಿಷೇಧವನ್ನು ಹೇರಿತ್ತು.

ಬಾಸ್ಮತಿಯೇತರ ಬಿಳಿ ಅಕ್ಕಿ ಮೇಲಿನ ನಿಷೇಧವನ್ನು ಹಿಂತೆಗೆದುಕೊಳ್ಳುವ ಕೇಂದ್ರ ಸರಕಾರದ ನಿರ್ಧಾರವನ್ನು ರಫ್ತುದಾರರು ಸ್ವಾಗತಿಸಿದ್ದಾರೆ. ಕೃಷಿವಲಯದಲ್ಲಿ ಇದರಿಂದ ದೊಡ್ಡ ಬದಲಾವಣೆಯಾಗಲಿದೆ ಎಂದು ಖ್ಯಾತ ಅಕ್ಕಿ ಮಾರಾಟ ಸಂಸ್ಥೆ ‘ರೈಸ್ ವಿಲ್ಲಾʼದ ಮುಖ್ಯ ಕಾರ್ಯನಿರ್ವಹಣಾಧಿಕಾರಿ (ಸಿಇಓ) ಸೂರಜ್ ಅಗರ್‌ವಾಲ್ ತಿಳಿಸಿದ್ದಾರೆ.

‘‘ ಕೇಂದ್ರ ಸರಕಾರದ ಈ ವ್ಯೆಹಾತ್ಮಕ ನಡೆಯು ರಫ್ತುದಾರರ ಆದಾಯವನ್ನು ಉತ್ತೇಜಿಸಲಿದೆ . ಅಲ್ಲದೆ ರೈತರನ್ನು ಸಬಲೀಕರಿಸಲಿದೆ. ಮುಂಬರುವ ನೂತನ ಖಾರಿಫ್ ಬೆಳೆಯ ಆಗಮನದ ಬಳಿಕ ರೈತರು ಅಧಿಕ ಆದಾಯವನ್ನು ನಿರೀಕ್ಷಿಸಬಹುದಾಗಿದೆ’’ ಎಂದವರು ಹೇಳಿದ್ದಾರೆ. ದೇಶದ ಇನ್ನೊಂದು ಪ್ರಮುಖ ಅಕ್ಕಿ ರಫ್ತುದಾರ ಸಂಸ್ಥೆಯಾದ ಹಲ್ದಾರ್ ಸಮೂಹದ ನಿರ್ದೇಶಕ ಕೇಶವ್ ಕೆ. ಹಲ್ದಾರ್ ಕೂಡಾ ಕೇಂದ್ರ ಸರಕಾರವು ಬಾಸ್ಮತಿಯೇತರ ಅಕ್ಕಿ ರಫ್ತಿನ ನಿಷೇದ ರದ್ದುಪಡಿಸಿರುವುದನ್ನು ಸ್ವಾಗತಿಸಿದ್ದಾರೆ.

ಕೇಂದ್ರ ಸರಕಾರವು ಕುಚ್ಚಲಕ್ಕಿಯ ಮೇಲಿನ ರಫ್ತು ತೆರಿಗೆಯನ್ನು ಶೇ.20ರಿಂದ ಶೇ.10ಕ್ಕೆ ಇಳಿಸಿರುವುದಾಗಿ ಕೃಷಿ ಸಚಿವಾಲಯದ ಅಧಿಸೂಚನೆ ತಿಳಿಸಿದೆ.

Tags:    

Writer - ವಾರ್ತಾಭಾರತಿ

contributor

Editor - Ismail

contributor

Byline - ವಾರ್ತಾಭಾರತಿ

contributor

Similar News