ದಲಿತ ಕಾರ್ಮಿಕನಿಗೆ ಕೊಲೆ ಬೆದರಿಕೆ | ಇಬ್ಬರ ವಿರುದ್ಧ ಪ್ರಕರಣ ದಾಖಲು

Update: 2024-09-28 15:37 GMT

ಸಾಂದರ್ಭಿಕ ಚಿತ್ರ

ಬಾದೋಹಿ(ಉತ್ತರ ಪ್ರದೇಶ) : ದಲಿತ ಕಾರ್ಮಿಕನಿಗೆ ಥಳಿಸಿದ ಹಾಗೂ ಆತನಿಗೆ ಜೀವ ಬೆದರಿಕೆ ಒಡ್ಡಿದ ಆರೋಪದಲ್ಲಿ ಜಮಖಾನೆ ರಫ್ತುದಾರ ಸಹಿತ ಇಬ್ಬರ ವಿರುದ್ಧ ಎಫ್ ಐ ಆರ್ ದಾಖಲಿಸಲಾಗಿದೆ ಎಂದು ಪೊಲೀಸರು ಶುಕ್ರವಾರ ತಿಳಿಸಿದ್ದಾರೆ.

ಜಮಖಾನೆ ರಫ್ತುದಾರ ಅನುರಾಗ್ ಬರ್ನವಾಲ್ ಹಾಗೂ ಅಪರಿಚಿತ ವ್ಯಕ್ತಿಯ ವಿರುದ್ಧ ಔರಾಯಿ ಪೊಲೀಸ್ ಠಾಣೆಯಲ್ಲಿ ಭಾರತೀಯ ನ್ಯಾಯ ಸಂಹಿತೆ (ಬಿಎನ್‌ಎಸ್) ಹಾಗೂ ಪರಿಶಿಷ್ಟ ಜಾತಿ ಹಾಗೂ ಪರಿಶಿಷ್ಟ ಪಂಗಡ (ದೌರ್ಜನ್ಯ ತಡೆ) ಕಾಯ್ದೆ ಅಡಿಯಲ್ಲಿ ಗುರುವಾರ ಪ್ರಕರಣ ದಾಖಲಿಸಲಾಗಿದೆ ಎಂದು ಅವರು ಮಾಹಿತಿ ನೀಡಿದ್ದಾರೆ.

ಬರ್ನವಾಲನು ಮೇಯಿಂದ ಆಗಸ್ಟ್ ವರೆಗೆ ಜಮಖಾನೆ ಪೂರ್ಣಗೊಳಿಸುವ ಹಾಗೂ ಪ್ಯಾಕಿಂಗ್ ಮಾಡುವ 7,80,000 ರೂ. ಮೌಲ್ಯದ ಕೆಲಸವನ್ನು ತನ್ನ ರಫ್ತು ಸಂಸ್ಥೆಯಲ್ಲಿ ದೂರುದಾರ ಓಂ ಪ್ರಕಾಶ್ ಗೌತಮ್ (34) ಹಾಗೂ ಇತರ 20 ಮಂದಿ ಕಾರ್ಮಿಕರಿಗೆ ವಹಿಸಿದ್ದನು.

ಆರಂಭದಲ್ಲಿ ಬರ್ನವಾಲನು ಅವರಿಗೆ 2,14,485 ರೂ. ನೀಡಿದ್ದನು ಎಂದು ಎಫ್‌ಐಆರ್ ಅನ್ನು ಉಲ್ಲೇಖಿಸಿ ಪೊಲೀಸ್ ಅಧೀಕ್ಷಕ (ಎಸ್‌ಪಿ) ಮೀನಾಕ್ಷಿ ಕಟ್ಯಾಯನ್ ತಿಳಿಸಿದ್ದಾರೆ.

ಆಗಸ್ಟ್ 30ರಂದು ಬರ್ನವಾಲ ಬಾಕಿ ಇರುವ ಮೊತ್ತ 5,65,515 ರೂ. ನೀಡುವುದಾಗಿ ಗೌತಮ್‌ನನ್ನು ತನ್ನ ಕಚೇರಿಗೆ ಕರೆದಿದ್ದ. ಗೌತಮ್ ಕಚೇರಿಗೆ ಆಗಮಿಸಿದಾಗ ಬರ್ನವಾಲ ಹಾಗೂ ಇನ್ನೋರ್ವ ಸೇರಿಕೊಂಡು ಆತನಿಗೆ ಥಳಿಸಿದ್ದ ಎಂದು ಅವರು ತಿಳಿಸಿದ್ದಾರೆ.

ಅವರು ಗೌತಮ್‌ನ ಅಂಗಿಯನ್ನು ಹರಿದಿದ್ದಾರೆ ಹಾಗೂ ಆ್ಯಸಿಡಿ ಸುರಿದು ಹತ್ಯೆಗೈಯಲಾಗುವುದು ಎಂದು ಬೆದರಿಕೆ ಒಡ್ಡಿದ್ದಾರೆ ಎಂದು ಎಫ್‌ಐಆರ್ ಅನ್ನು ಉಲ್ಲೇಖಿಸಿ ಅವರು ಹೇಳಿದ್ದಾರೆ.

Tags:    

Writer - ವಾರ್ತಾಭಾರತಿ

contributor

Editor - Ismail

contributor

Byline - ವಾರ್ತಾಭಾರತಿ

contributor

Similar News