ಶಿವಸೇನೆಯನ್ನು ವಿಭಜಿಸಿ ಇಲ್ಲವೆ ಬಂಧನ ಎದುರಿಸಿ ಎಂದು ಏಕನಾಥ್ ಶಿಂದೆಗೆ ಕೇಂದ್ರ ಸರಕಾರ ಬೆದರಿಕೆ ಒಡ್ಡಿತ್ತು: ಸಂಜಯ್ ರಾವತ್ ಆರೋಪ

Update: 2024-04-23 08:38 GMT

ಸಂಜಯ್ ರಾವತ್ | PC: PTI 

ಶಿವಸೇನೆಯನ್ನು ವಿಭಜಿಸಿ ಇಲ್ಲವೆ ಬಂಧನ ಎದುರಿಸಿ ಎಂದು ಏಕನಾಥ್ ಶಿಂದೆಗೆ ಕೇಂದ್ರ ಸರಕಾರ ಬೆದರಿಕೆ ಒಡ್ಡಿತ್ತು: ಸಂಜಯ್ ರಾವತ್ ಆರೋಪ

ಮುಂಬೈ: ಉದ್ಧವ್ ಠಾಕ್ರೆ ನೇತೃತ್ವದ ಮಹಾ ವಿಕಾಸ್ ಅಘಾಡಿ ಸರಕಾರದಲ್ಲಿ ಏಕನಾಥ್ ಶಿಂದೆ ಸಚಿವರಾಗಿದ್ದಾಗ, ಅವರನ್ನು ಬಂಧಿಸಲು ಪ್ರಧಾನಿ ನರೇಂದ್ರ ಮೋದಿ ನೇತೃತ್ವದ ಕೇಂದ್ರ ಸರಕಾರ ಯೋಜಿಸಿತ್ತು ಎಂದು ಮಂಗಳವಾರ ಶಿವಸೇನೆ(ಯುಬಿಟಿ) ಬಣದ ನಾಯಕ ಹಾಗೂ ಸಂಸದ ಸಂಜಯ್ ರಾವತ್ ಆರೋಪಿಸಿದ್ದಾರೆ.

“ಏಕನಾಥ್ ಶಿಂದೆ ಅವರನ್ನು ಬಂಧಿಸಲು ಮೋದಿ ಸರಕಾರ ಯೋಜಿಸಿತ್ತು. ಇದು ಸತ್ಯವೊ ಅಥವಾ ಸುಳ್ಳು ಎಂದು ಮುಖ್ಯಮಂತ್ರಿ ಅವರನ್ನೇ ಕೇಳಬೇಕು” ಎಂದು ರಾವತ್ ಹೇಳಿದರು. ಏಕನಾಥ್ ಶಿಂದೆ ಯಾವ ಪ್ರಕರಣದಲ್ಲಿ ಬಂಧಿತರಾಗಬೇಕಿತ್ತು ಎಂಬ ಪ್ರಶ್ನೆಗೆ, “ಅವರು ಹಲವಾರು ಅಕ್ರಮಗಳನ್ನು ನಡೆಸಿದ್ದಾರೆ. ಅವರು ಅಕ್ರಮ ಹಣ ವರ್ಗಾವಣೆಯಲ್ಲಿ ಭಾಗಿಯಾಗಿದ್ದಾರೆ” ಎಂದು ರಾವತ್ ಆರೋಪಿಸಿದರು.

ರಾವತ್ ಪ್ರಕಾರ, ಹಲವಾರು ಶಾಸಕರೊಂದಿಗೆ ಮಹಾ ವಿಕಾಸ್ ಅಘಾಡಿಯನ್ನು ತೊರೆಯದಿದ್ದರೆ, ನಿಮ್ಮ ವಿರುದ್ಧ ಕ್ರಮ ಕೈಗೊಳ್ಳಲಾಗುವುದು ಎಂದು ಶಿಂದೆಯನ್ನು ಬೆದರಿಸಲಾಗಿತ್ತು ಎಂದು ಹೇಳಿದ್ದಾರೆ. “ನೀವು ಶಿವಸೇನೆಯನ್ನು ವಿಭಜಿಸಿ ಇಲ್ಲವೆ ಬಂಧನವನ್ನು ಎದುರಿಸಿ ಎಂದು ಶಿಂದೆಗೆ ಹೇಳಲಾಗಿತ್ತು” ಎಂದು ಅವರು ಆಪಾದಿಸಿದ್ದಾರೆ.

ಮಹಾ ವಿಕಾಸ್ ಅಘಾಡಿ ಅವಧಿಯಲ್ಲಿ ಬಿಜೆಪಿ ನಾಯಕರಾದ ದೇವೇಂದ್ರ ಫಡ್ನವಿಸ್ ಹಾಗೂ ಗಿರೀಶ್ ಮಹಾಜನ್, ಆಶಿಶ್ ಶೆಲಾರ್, ಪ್ರವೀಣ್ ದಾರೇಕರ್ ಹಾಗೂ ಪ್ರಸಾದ್ ಲಾಡ್ ರಂಥ ಇನ್ನಿತರ ಬಿಜೆಪಿ ನಾಯಕರನ್ನೂ ಬಂಧಿಸಲಾಗಿತ್ತು ಎಂಬ ಮುಖ್ಯಮಂತ್ರಿ ಏಕನಾಥ್ ಶಿಂದೆ ಆರೋಪದ ಕುರಿತು ಪ್ರತಿಕ್ರಿಯಿಸಿದ ಅವರು, “ದೇವೇಂದ್ರ ಫಡ್ನವಿಸ್ ವಿರೋಧ ಪಕ್ಷಗಳ ನಾಯಕರ ಟೆಲಿಫೋನ್ ಅನ್ನು ಕದ್ದಾಲಿಸಿದ್ದರು. ಇದು ಭಾರತೀಯ ದೂರಸಂಪರ್ಕ ಕಾಯ್ದೆ ಅನ್ವಯ ಗಂಭೀರ ಅಪರಾಧ. ಇದೇ ರೀತಿ ಇನ್ನಿತರ ಬಿಜೆಪಿ ನಾಯಕರೂ ವಿವಿಧ ಗಂಭೀರ ಕ್ರಿಮಿನಲ್ ಪ್ರಕರಣಗಳನ್ನು ಎದುರಿಸುತ್ತಿದ್ದಾರೆ” ಎಂದು ಸ್ಪಷ್ಟೀಕರಿಸಿದ್ದಾರೆ.

Tags:    

Writer - ವಾರ್ತಾಭಾರತಿ

contributor

Editor - Ismail

contributor

Byline - ವಾರ್ತಾಭಾರತಿ

contributor

Similar News