ನೇಪಾಳದಿಂದ ಟೊಮೆಟೊ ಆಮದು ಮಾಡಿಕೊಳ್ಳಲು ಕೇಂದ್ರ ಸರಕಾರ ನಿರ್ಧಾರ
ಹೊಸದಿಲ್ಲಿ: ಟೊಮೆಟೊ ದರವನ್ನು ಕಡಿಮೆ ಮಾಡುವುದಕ್ಕಾಗಿ ಭಾರತವು ಟೊಮೆಟೊವನ್ನು ನೇಪಾಳದಿಂದ ಆಮದು ಮಾಡಿಕೊಳ್ಳಲಿದೆ ಎಂದು ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಗುರುವಾರ ಲೋಕಸಭೆಗೆ ತಿಳಿಸಿದರು.
ಅವಿಶ್ವಾಸ ನಿರ್ಣಯಕ್ಕೆ ಉತ್ತರ ನೀಡಿದ ಅವರು, ಬೆಲೆಯೇರಿಕೆಯನ್ನು ತಡೆಯಲು ಸರಕಾರ ತೆಗೆದುಕೊಂಡಿರುವ ಕ್ರಮಗಳ ಬಗ್ಗೆ ಮತ್ತು ಟೊಮೆಟೊ ದರವನ್ನು ನಿಯಂತ್ರಣದಲ್ಲಿರಿಸಲು ಸರಕಾರ ಏನು ಮಾಡುತ್ತಿದೆ ಎಂಬ ಬಗ್ಗೆ ವಿವರಣೆಗಳನ್ನು ನೀಡಿದರು.
‘‘ಹಣದುಬ್ಬರವನ್ನು ತಡೆಯಲು ಹಲವಾರು ಕ್ರಮಗಳನ್ನು ತೆಗೆದುಕೊಳ್ಳಲಾಗಿದೆ. ಜನ ಸಾಮಾನ್ಯರನ್ನು ಬಾಧಿಸುತ್ತಿರುವ ಬೆಲೆಯೇರಿಕೆಯನ್ನು ನಿಯಂತ್ರಿಸಲು, ಸಚಿವರ ಗುಂಪೊಂದು ಸಾಂದರ್ಭಿಕ ಕ್ರಮಗಳನ್ನು ತೆಗೆದುಕೊಳ್ಳುತ್ತಿದೆ’’ ಎಂದು ಅವರು ನುಡಿದರು.
ತೊಗರಿ ಬೇಳೆಯನ್ನು ಮೊಝಾಂಬಿಕ್ ನಿಂದ ಆಮದು ಮಾಡಿಕೊಳ್ಳಲಾಗುತ್ತಿದೆ ಮತ್ತು ಉದ್ದಿನ ಬೇಳೆಯನ್ನು ಮ್ಯಾನ್ಮಾರ್ನಿಂದ ಆಮದು ಮಾಡಿಕೊಳ್ಳಲಾಗುವುದು ಎಂದು ಅವರು ತಿಳಿಸಿದರು.
ಹೆಚ್ಚುವರಿ ಸಂಗ್ರಹವನ್ನು ಕಾಯ್ದುಕೊಳ್ಳಲು ಮೂರು ಲಕ್ಷ ಟನ್ ಈರುಳ್ಳಿಯನ್ನು ಪಡೆದುಕೊಳ್ಳಲಾಗಿದೆ ಎಂದರು.
ದಿಲ್ಲಿ-ರಾಷ್ಟ್ರ ರಾಜಧಾನಿ ವಲಯದಲ್ಲಿ ಟೊಮ್ಯಾಟೊ ದರವನ್ನು ಕಿಲೋಗೆ 70 ರೂ.ಗೆ ಇಳಿಸಲಾಗುವುದು ಎಂದು ಸಚಿವೆ ಭರವಸೆ ನೀಡಿದರು. ಅದಕ್ಕಾಗಿ ಮಹಾರಾಷ್ಟ್ರ ಮತ್ತು ಕರ್ನಾಟಕದಿಂದ ಟೊಮೆಟೊಗಳನ್ನು ಖರೀದಿಸಿ ದಿಲ್ಲಿ, ಬಿಹಾರ, ಉತ್ತರಪ್ರದೇಶ, ಪಶ್ಚಿಮ ಬಂಗಾಳ ಮತ್ತು ರಾಜಸ್ಥಾನಗಳಲ್ಲಿ ನಫೆಡ್ ಮತ್ತು ಇತರ ಸಹಕಾರಿ ಸಂಘಗಳ ಮೂಲಕ ವಿತರಿಸಲಾಗುತ್ತಿದೆ ಎಂದರು.