463 ಪೊಲೀಸ್ ಸಿಬ್ಬಂದಿಗೆ ‘ಕೇಂದ್ರೀಯ ಗೃಹಮಂತ್ರಿ ದಕ್ಷತಾ ಪದಕ’ ಘೋಷಣೆ
ಹೊಸದಿಲ್ಲಿ : ಅತ್ಯುತ್ತಮ ಕರ್ತವ್ಯ ನಿರ್ವಹಿಸಿರುವುದನ್ನು ಗುರುತಿಸಿ ವಿವಿಧ ರಾಜ್ಯಗಳು ಹಾಗೂ ಕೇಂದ್ರೀಯ ಸಂಸ್ಥೆಗಳ 463 ಪೊಲೀಸ್ ಸಿಬ್ಬಂದಿಯನ್ನು 2024ನೇ ಸಾಲಿನ ‘ಕೇಂದ್ರೀಯ ಗೃಹಮಂತ್ರಿ ದಕ್ಷತಾ ಪದಕ’ಕ್ಕೆ ಆಯ್ಕೆ ಮಾಡಲಾಗಿದೆ.
ವಿಶೇಷ ಕಾರ್ಯಾಚರಣೆಗಳು, ತನಿಖೆ ಹಾಗೂ ವಿಧಿವಿಜ್ಞಾನದಲ್ಲಿ ವಿಶೇಷ ಸೇವೆ ಸಲ್ಲಿಸಿದವರಿಗೆ ಈ ಪದಕವನ್ನು ನೀಡಲಾಗುತ್ತಿದೆ ಎಂದು ಅಧಿಕೃತ ಹೇಳಿಕೆ ತಿಳಿಸಿದೆ.
2024ನೇ ಸಾಲಿನಲ್ಲಿ ಈ ಪದಕವನ್ನು ವಿವಿಧ ರಾಜ್ಯಗಳ, ಕೇಂದ್ರಾಡಳಿತ ಪ್ರದೇಶಗಳ, ಕೇಂದ್ರ ಶಸಸ್ತ್ರ ಪೊಲೀಸ್ ಪಡೆ ಹಾಗೂ ಕೇಂದ್ರ ಪೊಲೀಸ್ ಸಂಘಟನೆಗಳ (ಸಿಪಿಒಗಳು) 463 ಸಿಬ್ಬಂದಿಗೆ ನೀಡಲಾಗುತ್ತಿದೆ.
ಪ್ರಧಾನಿ ನರೇಂದ್ರ ಮೋದಿ ನೇತೃತ್ವದಲ್ಲಿ ಮತ್ತು ಕೇಂದ್ರ ಸಚಿವ ಅಮಿತ್ ಶಾ ಅವರ ಮಾರ್ಗದರ್ಶನದಲ್ಲಿ ನೀಡಲು ಆರಂಭವಾದ ‘ಕೇಂದ್ರೀಯ ಗೃಹಮಂತ್ರಿ ದಕ್ಷತಾ ಪದಕ’ವು ಎಲ್ಲ ಪೊಲೀಸ್ ಸಿಬ್ಬಂದಿಯಲ್ಲಿ ನೈತಿಕತೆಯನ್ನು ಪ್ರೋತ್ಸಾಹಿಸುತ್ತದೆ ಎಂದು ಹೇಳಿಕೆ ತಿಳಿಸಿದೆ.
ಸರ್ದಾರ್ ವಲ್ಲಭಾ ಭಾಯಿ ಪಟೇಲ್ ಅವರ ಜನ್ಮ ದಿನವಾದ ಗುರುವಾರ ಈ ಪದಕವನ್ನು ಘೋಷಿಸಲಾಗಿದೆ.