ಡಿಜಿಟಲ್‌ ಸುದ್ದಿ ಸಂಸ್ಥೆ ʼನ್ಯಾಷನಲ್‌ ದಸ್ತಕ್‌ʼ ಚಾನಲ್‌ ತೆಗೆದುಹಾಕಲು ಯುಟ್ಯೂಬ್‌ಗೆ ಕೇಂದ್ರದ ಸೂಚನೆ

Update: 2024-04-09 11:36 GMT

ಹೊಸದಿಲ್ಲಿ: ಡಿಜಿಟಲ್‌ ಸುದ್ದಿ ಸಂಸ್ಥೆ ನ್ಯಾಷನಲ್‌ ದಸ್ತಕ್‌ನ 94,10,000 ಚಂದಾದಾರರಿರುವ ಯುಟ್ಯೂಬ್‌ ಚಾನಲ್‌ ಅನ್ನು ತೆಗೆದುಹಾಕುವಂತೆ ಕೇಂದ್ರ ಸರ್ಕಾರ ಗೂಗಲ್‌ ಒಡೆತನದ ಯುಟ್ಯೂಬ್‌ ಆಡಳಿತಕ್ಕೆ ಸೂಚಿಸಿದೆ ಎಂದು ಸುದ್ದಿ ಸಂಸ್ಥೆ ವರದಿ ಮಾಡಿದೆ.

“ಸರ್ಕಾರಕ್ಕೆ ನ್ಯಾಷನಲ್‌ ದಸ್ತಕ್‌ ಮುಚ್ಚಬೇಕಿದೆ,” ಎಂದು ಎಕ್ಸ್‌ನಲ್ಲಿ ಮಾಡಿದ ಪೋಸ್ಟ್‌ ಒಂದರಲ್ಲಿ ಸಂಸ್ಥೆ ಹೇಳಿದೆ.

“ಎಪ್ರಿಲ್‌ 3ರಂದು ನೋಟಿಸ್‌ ಕಳುಹಿಸಲಾಗಿತ್ತು. ಇನ್ನೊಂದು ಯುಟ್ಯೂಬ್‌ ವಾಹಿನಿ ಆರ್ಟಿಕಲ್‌ 19 ಗೂ ನೋಟಿಸ್‌ ಜಾರಿಯಾಗಿದೆ. ಮಾದರಿ ನೀತಿ ಸಂಹಿತೆ ಜಾರಿಯಲ್ಲಿರುವಾಗ ಇದೆಲ್ಲ ನಡೆಯುತ್ತಿದೆ,” ಎಂದು ನ್ಯಾಷನಲ್‌ ದಸ್ತಕ್‌ ಟ್ವೀಟ್‌ ಮಾಡಿದೆ.

ತನ್ನನ್ನು ದಲಿತರು, ಆದಿವಾಸಿಗಳು, ರೈತರು, ಮಹಿಳೆಯರು ಮತ್ತು ಶೋಷಿತ ಜನರ ದನಿಯೆಂದು ನ್ಯಾಷನಲ್‌ ದಸ್ತಕ್‌ ವಿವರಿಸುತ್ತದೆ. ಸಂಸ್ಥೆಯ ಯುಟ್ಯೂಬ್‌ ಚಾನಲ್‌ ಇಂದೂ ಕಾರ್ಯಾಚರಿಸುತ್ತಿದೆ.

ದೇಶದಲ್ಲಿ ಲಕ್ಷಾಂತರ ಸುದ್ದಿ ಪತ್ರಿಕೆಗಳು ಮತ್ತು ಟಿವಿ ವಾಹಿನಿಗಳಿರುವಾಗ ದಲಿತರಿಗಾಗಿ ಇರುವ ಸುದ್ದಿ ಸಂಸ್ಥೆಯ ಬಗ್ಗೆ ಕೇಂದ್ರ ಸರ್ಕಾರಕ್ಕೆ ಭಯವಿದೆ ಎಂದು ಸಂಸ್ಥೆ ಹೇಳಿದೆ. ನ್ಯಾಷನಲ್‌ ದಸ್ತಕ್‌ ಯುಟ್ಯೂಬ್‌ ಚಾನಲ್‌ ನಿಲ್ಲಿಸಲು ಕೇಂದ್ರ ಅಥವಾ ಯುಟ್ಯೂಬ್‌ ಯಾವುದೇ ಕಾರಣ ನೀಡಿಲ್ಲ ಎಂದು ಹೇಳಲಾಗಿದೆ.

ಐಟಿ ನಿಯಮಗಳು 2021 ಇದರ ನಿಯಮ 15(2) ಮತ್ತು ಐಟಿ ಕಾಯಿದೆ 2000 ಇದರ ಸೆಕ್ಷನ್ 69ಎ ಅನ್ವಯ ಕೇಂದ್ರ ಸರ್ಕಾರದ ವಾರ್ತಾ ಮತ್ತು ಪ್ರಸಾರ ಸಚಿವಾಲಯದಿಂದ ನೋಟಿಸ್‌ ಜಾರಿಯಾಗಿದೆ ಎಂದು ನ್ಯಾಷನಲ್‌ ದಸ್ತಕ್‌ಗೆ ಯುಟ್ಯೂಬ್‌ ಮಾಡಿರುವ ಇಮೇಲ್‌ನಲ್ಲಿ ತಿಳಿಸಲಾಗಿದೆ.

Tags:    

Writer - ವಾರ್ತಾಭಾರತಿ

contributor

Editor - Irshad Venur

contributor

Byline - ವಾರ್ತಾಭಾರತಿ

contributor

Similar News