ಚಂಡಿಗಡ ಮೇಯರ್ ಚುನಾವಣೆ | ಸುಪ್ರೀಂ ಕೋರ್ಟ್ ನಲ್ಲಿ ಬೇಷರತ್ ಕ್ಷಮೆ ಯಾಚಿಸಿದ ಚುನಾವಣಾಧಿಕಾರಿ ಅನಿಲ್ ಮಸೀಹ್
ಹೊಸದಿಲ್ಲಿ : ಚಂಡಿಗಡ ಮೇಯರ್ ಚುನಾವಣೆಯಲ್ಲಿ ಚುನಾವಣಾಧಿಕಾರಿಯಾಗಿದ್ದ ಅನಿಲ್ ಮಸೀಹ್ ಅವರು ಮತಪತ್ರಗಳನ್ನು ವಿರೂಪಗೊಳಿಸುವಲ್ಲಿ ತನ್ನ ಪಾತ್ರಕ್ಕೆ ಸಂಬಂಧಿಸಿದಂತೆ ಶುಕ್ರವಾರ ಸರ್ವೋಚ್ಚ ನ್ಯಾಯಾಲಯದಲ್ಲಿ ಬೇಷರತ್ ಕ್ಷಮೆ ಯಾಚಿಸಿದ್ದಾರೆ.
ಚಂಡಿಗಡ ಮೇಯರ್ ಚುನಾವಣೆಯಲ್ಲಿ ಎಂಟು ಮತಪತ್ರಗಳನ್ನು ವಿರೂಪಗೊಳಿಸಿದ್ದಕ್ಕಾಗಿ ಸರ್ವೋಚ್ಚ ನ್ಯಾಯಾಲಯವು ಮಸೀಹ್ರನ್ನು ತೀವ್ರ ತರಾಟೆಗೆತ್ತಿಕೊಂಡಿತ್ತು.
ಮಸೀಹ್ ಕ್ಷಮಾಯಾಚನೆಯನ್ನು ಪರಿಶೀಲಿಸಿ ಅದನ್ನು ದಾಖಲಿಸಿಕೊಂಡ ಸರ್ವೋಚ್ಚ ನ್ಯಾಯಾಲಯವು ಜುಲೈ ಎರಡನೇ ವಾರಕ್ಕೆ ಮುಂದಿನ ವಿಚಾರಣೆಯನ್ನು ನಿಗದಿಗೊಳಿಸಿತು.
ಬಿಜೆಪಿ ಅಭ್ಯರ್ಥಿ ಮನೋಜ ಸೋನ್ಕರ್ ಅವರನ್ನು ಮೇಯರ್ ಹುದ್ದೆಗೆ ಆಯ್ಕಯಾಗಿದ್ದಾರೆ ಎಂದು ಮಸೀಹ್ ಪ್ರಕಟಿಸಿದ್ದ ಚುನಾವಣಾ ಫಲಿತಾಂಶವನ್ನು ಫೆ.20ರಂದು ರದ್ದುಗೊಳಿಸಿದ್ದ ಸರ್ವೋಚ್ಚ ನ್ಯಾಯಾಲಯವು, ಚಂಡಿಗಡ ಮೇಯರ್ ಚುನಾವಣೆಯಲ್ಲಿ ಆಪ್ ಅಭ್ಯರ್ಥಿ ಕುಲದೀಪ್ ಕುಮಾರ್ ಗೆದ್ದಿದ್ದಾರೆ ಎಂದು ಘೋಷಿಸಿತ್ತು.
ಮಸೀಹ್ಗೆ ಶೋಕಾಸ್ ನೋಟಿಸ್ ಹೊರಡಿಸಿದ್ದ ಸಂದರ್ಭದಲ್ಲಿ ನ್ಯಾಯಾಲಯವು, ಅವರು ಆಪ್ ನ ಕುಲದೀಪ ಕುಮಾರ ಪರವಾಗಿ ಚಲಾವಣೆಯಾಗಿದ್ದ ಮತಪತ್ರಗಳನ್ನು ಉದ್ದೇಶಪೂರ್ವಕವಾಗಿ ವಿರೂಪಗೊಳಿಸಿದ್ದಾರೆ ಎಂದು ಹೇಳಿತ್ತು.