ಸಂಗಾತಿಗಳನ್ನು ಆಗಾಗ ಬದಲಾಯಿಸುವ ʼಲಿವ್ ಇನ್ ಸಂಬಂಧʼ ಆರೋಗ್ಯಕರ ಸಮಾಜದ ಲಕ್ಷಣವಲ್ಲ ; ಅಲಹಾಬಾದ್ ಹೈಕೋರ್ಟ್
ಸಂಗಾತಿಗಳನ್ನು ಆಗಾಗ ಬದಲಾಯಿಸುವ ಪಾಶ್ಚಾತ್ಯ ಕಲ್ಪನೆಯ ʼಲಿವ್ ಟುಗೇದರ್ʼ ಸಂಬಂಧಗಳು ಸ್ಥಿರ ಹಾಗೂ ಆರೋಗ್ಯಕರ ಸಮಾಜದ ಲಕ್ಷಣವಲ್ಲ
ಪ್ರಯಾಗ್ ರಾಜ್ : ಸಂಗಾತಿಗಳನ್ನು ಆಗಾಗ ಬದಲಾಯಿಸುವ ಪಾಶ್ಚಾತ್ಯ ಕಲ್ಪನೆಯ ʼಲಿವ್ ಟುಗೇದರ್ʼ ಸಂಬಂಧಗಳು ಸ್ಥಿರ ಹಾಗೂ ಆರೋಗ್ಯಕರ ಸಮಾಜದ ಲಕ್ಷಣವಲ್ಲ ಎಂದು ಅಲಹಾಬಾದ್ ಹೈಕೋರ್ಟ್ ಹೇಳಿದೆ. ʼಲಿವ್ ಟುಗೇದರ್ʼ ಸಂಬಂಧದ ಹೆಸರಿನಲ್ಲಿ ತನ್ನ ಸಂಗಾತಿಯನ್ನು ಅತ್ಯಾಚಾರ ಮಾಡಿದ ಪ್ರಕರಣದ ಆರೋಪಿಗೆ ಜಾಮೀನು ನೀಡುವಾಗ ಈ ಮಹತ್ವದ ಹೇಳಿಕೆ ಹೊರಬಂದಿದೆ ಎಂದು ಲೈವ್ ಲಾ ವರದಿ ಮಾಡಿದೆ.
೧೯ರ ವಯಸ್ಸಿನ ಯುವತಿಯ ಮೇಲೆ ʼಲಿವ್ ಇನ್ ಟುಗೇದರ್ʼನಲ್ಲಿದ್ದ ಸಂಗಾತಿ ಮದುವೆಯಾಗುವುದಾಗಿ ನಂಬಿಸಿ ಅತ್ಯಾಚಾರ ಎಸಗಿದ ಪ್ರಕರಣದ ವಿಚಾರಣೆಯ ವೇಳೆ ಈ ಹೇಳಿಕೆ ಹೊರಬಿದ್ದಿದೆ. ಯುವತಿ ಗರ್ಭಿಣಿಯಾದ ಬಳಿಕ ಆರೋಪಿ ಮದುವೆಗೆ ನಿರಾಕರಿಸಿದ್ದರಿಂದ, ಮದುವೆಯಾಗುವ ಸುಳ್ಳು ಭರವಸೆ ನೀಡಿ ಅತ್ಯಾಚಾರ ಎಸಗಿದ್ದ ಬಗ್ಗೆ ಯುವತಿ ದೂರು ಸಲ್ಲಿಸಿದ್ದಳು.
“ಮದುವೆಯ ಬಂಧನವನ್ನು ಹಿಡಿದಿಟ್ಟುಕೊಳ್ಳಲು ಮುಂದುವರಿದ ದೇಶಗಳು ಎಂದು ಕರೆಸಿಕೊಳ್ಳುತ್ತಿರುವ ದೇಶಗಳು ಕಷ್ಟಪಡುತ್ತಿವೆ. ಆ ಕಾರಣಕ್ಕೆ ಅವರಿಗೆ ಲಿವ್ ಇನ್ ಸಂಬಂಧಗಳು ಸಾಮಾನ್ಯವಾಗಿದೆ. ಆದರೆ ನಮ್ಮಲ್ಲಿ ಮದುವೆಯ ಸಂಬಂಧಗಳು ಗೌರವಿಸಲ್ಪಡುತ್ತಿವೆ. ನಮ್ಮ ಸಮಾಜದಲ್ಲಿ ʼಲಿವ್ ಇನ್ʼ ಸಂಬಂಧಗಳನ್ನು ಸಾಮಾನ್ಯ ಎಂದು ಭಾವಿಸುವುದು ಸಧ್ಯದ ಮಟ್ಟಿಗೆ ಸರಿಯಲ್ಲ” ಎಂದು ನ್ಯಾಯಮೂರ್ತಿ ಸಿದ್ದಾರ್ಥ್ ತಮ್ಮ ತೀರ್ಪಿನಲ್ಲಿ ಹೇಳಿದ್ದಾರೆ.
ಪ್ರಸ್ತುತ ಮದುವೆ ಮತ್ತು ʼಲಿವ್ ಇನ್ʼ ಸಂಬಂಧಗಳಲ್ಲಿ ದಾಂಪತ್ಯ ಜೀವನದಲ್ಲಿ ಮೋಸ ಮಾಡುವುದನ್ನು ಮುಂದುವರೆಯುತ್ತಿರುವ ಸಮಾಜದ ಲಕ್ಷಣ ಎಂದು ಭಾವಿಸುತ್ತಿರುವುದನ್ನು ನ್ಯಾಯಮೂರ್ತಿಗಳು ಟೀಕಿಸಿದ್ದಾರೆ. ಯುವಜನತೆ ಧೀರ್ಘಕಾಲದ ಪರಿಣಾಮಗಳ ಅರಿವಿಲ್ಲದೇ ಇಂತಹ ತತ್ವಗಳಿಗೆ ಆಕರ್ಷಿತರಾಗುತ್ತಿದ್ದಾರೆ ಎಂದು ಕಳವಳ ವ್ಯಕ್ತಪಡಿಸಿದರು. ಮದುವೆಯ ಸಂಬಂಧಗಳ ಸಾಂಸ್ಥಿಕ ನೆಲೆಯನ್ನು ನಾಶ ಮಾಡಲು ಈಗಿನ ಸಿನಿಮಾ ಹಾಗೂ ಟಿವಿ ಷೋಗಳು ವ್ಯವಸ್ಥಿತವಾಗಿ ಉತ್ತೇಜನ ನೀಡುತ್ತಿದೆ ಎಂದು ಅವರು ದೂಷಿಸಿದರು.
ಈ ರೀತಿಯ ಸಂಬಂಧಗಳಿಂದ ಜನಿಸಿದ ಮಕ್ಕಳು ಸಮಾಜದಲ್ಲಿ ಬಹಳಷ್ಟು ಸಮಸ್ಯೆಗಳನ್ನು ಎದುರಿಸುತ್ತಾರೆ. ಸಂಗಾತಿಗಳು ಬದಲಾದ ತಕ್ಷಣ ಮಕ್ಕಳು ಸಮಾಜಕ್ಕೆ ಹೊರೆಯಾಗುತ್ತಾರೆ. ಅವರು ತಪ್ಪು ದಾರಿಗೆ ಬೀಳುವ ಆತಂಕವೂ ಇದೆ. ಇದು ರಾಷ್ಟ್ರದ ಬೆಳವಣಿಗೆಗೆ ಮಾರಕ. ಒಂದು ವೇಳೆ ಈ ಸಂಬಂಧಗಳಲ್ಲಿ ಹೆಣ್ಣು ಮಗು ಹುಟ್ಟಿದರೆ ಅದರ ದುಷ್ಟಪರಿಣಾಮಗಳೇ ಹೆಚ್ಚು. ಕುಟುಂಬ ಸಂಬಂಧದ ಬಗ್ಗೆ ಗೌರವಿವಲ್ಲದ ಯುವನಜನರಿಂದ ದೇಶದ ಪ್ರಗತಿಗೆ ಏನೂ ಕೊಡುಗೆ ನಿರೀಕ್ಷಿಸಲು ಸಾಧ್ಯವಿಲ್ಲ ಎಂದು ನ್ಯಾಯಾಲಯ ಅಭಿಪ್ರಾಯಪಟ್ಟಿದೆ ಎಂದು ಲೈವ್ ಲಾ ವರದಿ ಉಲ್ಲೇಖಿಸಿದೆ.