ಆರ್.ಜಿ ಕರ್ ಪ್ರಾಚಾರ್ಯರ ವಿರುದ್ಧದ ಆರೋಪಗಳು ಮರಣದಂಡನೆಗೆ ಅರ್ಹ: ಕೋರ್ಟ್

Update: 2024-09-28 02:59 GMT

ಕೊಲ್ಕತ್ತಾ: ಆರ್.ಜಿ ಕರ್ ವೈದ್ಯಕೀಯ ಕಾಲೇಜು ಮತ್ತು ಆಸ್ಪತ್ರೆಯ ಮಾಜಿ ಪ್ರಾಚಾರ್ಯ ಸಂದೀಪ್ ಘೋಷ್ ಗೆ ಜಾಮೀನು ನಿರಾಕರಿಸಿರುವ ಸಿಬಿಐ ನಿಯೋಜಿತ ನ್ಯಾಯಾಲಯ, ಘೋಷ್ ವಿರುದ್ಧದ ಆರೋಪಗಳು ತೀವ್ರ ಗಂಭೀರ ಸ್ವರೂಪದ್ದಾಗಿವೆ. ಇವು ಸಾಬೀತಾದರೆ ಮರಣದಂಡನೆಗೆ ಅರ್ಹ ಎಂದು ಅಭಿಪ್ರಾಯಪಟ್ಟಿದೆ.

ಟ್ರೈನಿ ವೈದ್ಯೆಯ ಅತ್ಯಾಚಾರ ಮತ್ತು ಹತ್ಯೆ ಪ್ರಕರಣದಲ್ಲಿ ಪುರಾವೆಗಳ ನಾಶ ಮತ್ತು ಎಫ್ಐಆರ್ ದಾಖಲಿಸುವಲ್ಲಿ ವಿಳಂಬ ಮಾಡಿದ ಆರೋಪಕ್ಕೆ ಸಂಬಂಧಿಸಿದಂತೆ ಘೋಷ್ ಹಾಗೂ ತಾಳಾ ಪೊಲೀಸ್ ಠಾಣಾಧಿಕಾರಿ ಅಭಿಜಿತ್ ಮಂಡಲ್ ಅವರನ್ನು ಸಿಬಿಐ ಬಂಧಿಸಿತ್ತು.

ಈ ಪ್ರಕರಣದ ಬಗ್ಗೆ ಕೇಂದ್ರೀಯ ತನಿಖಾ ಸಂಸ್ಥೆ ನಡೆಸುತ್ತಿರುವ ತನಿಖೆಗಳು ಭರದಿಂದ ಸಾಗುತ್ತಿವೆ ಎನ್ನುವುದು ಕೇಸ್ ಡೈರಿಯಿಂದ ತಿಳಿಯುತ್ತದೆ ಎಂದು ನ್ಯಾಯಾಲಯ ತನ್ನ ಆದೇಶದಲ್ಲಿ ಹೇಳಿದೆ.

ಹೆಚ್ಚುವರಿ ಮುಖ್ಯ ಜ್ಯುಡೀಷಿಯನ್ ಮ್ಯಾಜಿಸ್ಟ್ರೇಟ್ ಎಸ್ ಡೇ, ಘೋಷ್ ಗೆ ಜಾಮೀನು ನೀಡಲು ನಿರಾಕರಿಸಿ, ಘೋಷ್ ವಿರುದ್ಧದ ಆರೋಪಗಳ ತೀವ್ರತೆ ಹಾಗೂ ಸ್ವರೂಪ ಗಂಭೀರ ಹಾಗೂ ಇವು ಸಾಬೀತಾದರೆ ವಿರಳಾತಿವಿರಳ ಪ್ರಕರಣದಲ್ಲಿ ನೀಡುವ ಮರಣದಂಡನೆಗೆ ಅರ್ಹ ಎಂದು ಅಭಿಪ್ರಾಯಪಟ್ಟಿದ್ದಾರೆ.

ಆರೋಪಿಯನ್ನು ಜಾಮೀನಿನ ಮೇಲೆ ಬಿಡುಗಡೆ ಮಾಡುವುದು ಅನ್ಯಾಯ ಎನಿಸುತ್ತದೆ ಎಂದು ವಿಶ್ಲೇಷಿಸಿದ್ದಾರೆ. ಆರೋಪಿ ಇತರರ ನೆರವಿನಿಂದ ಅಪರಾಧ ಎಸಗಿರಬಹುದು ಅಥವಾ ಘಟನಾ ಸ್ಥಳದಲ್ಲಿ ಹಾಜರಿರಬೇಕಾದ ಅಗತ್ಯ ಇಲ್ಲ ಎಂದು ಸ್ಪಷ್ಟಪಡಿಸಿದ್ದಾರೆ. ಅಭಿಜಿತ್ ಮಂಡಲ್ ಜಾಮೀನು ಮನವಿಯನ್ನು ಕೂಡಾ ನ್ಯಾಯಾಲಯ ತಿರಸ್ಕರಿಸಿದೆ. ಸೆಪ್ಟೆಂಬರ್ 30ರವರೆಗೆ ಉಭಯ ಆರೋಪಿಗಳನ್ನು ನ್ಯಾಯಾಂಗ ವಶಕ್ಕೆ ಒಪ್ಪಿಸಬೇಕು ಎಂಬ ಸಿಬಿಐ ಮನವಿಯನ್ನು ನ್ಯಾಯಾಲಯ ಪುರಸ್ಕರಿಸಿದೆ.

Tags:    

Writer - ವಾರ್ತಾಭಾರತಿ

contributor

Editor - jafar sadik

contributor

Byline - ವಾರ್ತಾಭಾರತಿ

contributor

Similar News