ಛತ್ತೀಸ್‌ಗಡ: ಸಾಮಾಜಿಕ ಬಹಿಷ್ಕಾರದ ಜೊತೆಗೆ ಮೃತರನ್ನು ಹೂಳಲೂ ಪರದಾಡುತ್ತಿರುವ ಕ್ರೈಸ್ತರು; ವರದಿ
ನಾರಾಯಣಪುರ: ಛತ್ತೀಸ್‌ಗಡದ ನಾರಾಯಣಪುರ ಜಿಲ್ಲೆಯಲ್ಲಿ ಕ್ರೈಸ್ತ ಧರ್ಮಕ್ಕೆ ಮತಾಂತರಗೊಂಡಿರುವ ಆದಿವಾಸಿಗಳು ತಮ್ಮ ಮೃತ ಕುಟುಂಬ ಸದಸ್ಯರ ಅಂತ್ಯಸಂಸ್ಕಾರ ನಡೆಸಲು ಪರದಾಡುತ್ತಿದ್ದಾರೆ. ಆದಿವಾಸಿಗಳೇ ಆಗಿರುವ ಇತರ ಗ್ರಾಮಸ್ಥರು ಗ್ರಾಮದ ಜಮೀನಿನಲ್ಲಿ ಮೃತದೇಹಗಳನ್ನು ದಫನ ಮಾಡಲು ಅವರಿಗೆ ಅವಕಾಶ ನೀಡುತ್ತಿಲ್ಲ. ಇದರ ಜೊತೆಗೆ ಈ ಕ್ರೈಸ್ತ ಆದಿವಾಸಿಗಳು ಸಾಮಾಜಿಕ ಬಹಿಷ್ಕಾರವನ್ನೂ ಎದುರಿಸುತ್ತಿದ್ದಾರೆ ಎಂದು thewire.in ವರದಿ ಮಾಡಿದೆ.
ಇತ್ತೀಚಿಗೆ ಜಿಲ್ಲೆಯ ಬ್ರೆಹೆಬೆದಾ ಗ್ರಾಮದ 13ರ ಹರೆಯದ ಬಾಲಕಿ ಸುನೀತಾ ಟೈಫಾಯ್ಡ್‌ನಿಂದ ಮೃತಪಟ್ಟಿದ್ದಳು. ಕುಟುಂಬಸ್ಥರು ಆಕೆಯ ಅಂತ್ಯಸಂಸ್ಕಾರಕ್ಕೆ ಸಿದ್ಧತೆಗಳನ್ನು ನಡೆಸುತ್ತಿದ್ದಾಗ ಭಾರೀ ಸಂಖ್ಯೆಯಲ್ಲಿದ್ದ ಗ್ರಾಮಸ್ಥರು ಕ್ರಿಶ್ಚಿಯನ್ ವಿಧಿಗಳಂತೆ ಅಂತ್ಯಸಂಸ್ಕಾರ ನಡೆಸುವುದನ್ನು ತಡೆದಿದ್ದರು. ಆದಿವಾಸಿ ಸಂಪ್ರದಾಯಗಳಂತೆ ಅಂತ್ಯಸಂಸ್ಕಾರ ನಡೆಸುವಂತೆ ಕುಟುಂಬವನ್ನು ಒತ್ತಾಯಿಸಿದ್ದರು. ಕೊನೆಗೂ ಗ್ರಾಮದಿಂದ ಸುಮಾರು 10 ಕಿ.ಮೀ.ದೂರದ ಕಾಡಿನೊಳಗೆ ಸುನೀತಾಳ ಅಂತ್ಯಸಂಸ್ಕಾರ ನಡೆದಿತ್ತು. ಜಿಲ್ಲೆಯ ಗ್ರಾಮಗಳಲ್ಲಿಯ ಹಲವಾರು ಕ್ರೈಸ್ತರು ಇಂತಹ ಕಹಿ ಘಟನೆಗಳನ್ನು ಅನುಭವಿಸಿದ್ದಾರೆ.
ಕೊಕೋಡಿ ಗ್ರಾಮದ ನಿವಾಸಿ ಸರಿತಾ (24) 2012ರಲ್ಲಿ ಕ್ರೈಸ್ತ ಧರ್ಮಕ್ಕೆ ಮತಾಂತರಗೊಂಡಿದ್ದು, ಸ್ವಂತ ಕುಟುಂಬವೇ ಆಕೆಯನ್ನು ಬಹಿಷ್ಕರಿಸಿದೆ. ಹಲವು ಗ್ರಾಮಗಳಲ್ಲಿ ಇಂತಹ ಘಟನೆಗಳು ನಡೆದಿವೆ.
‘ನಾವೂ ಅವರಂತೆಯೇ ಆದಿವಾಸಿಗಳು. ಆದರೆ ಅವರು (ಗ್ರಾಮಸ್ಥರು) ನಾವು ಚರ್ಚ್‌ಗೆ ಹೋಗುವುದನ್ನು ಅಥವಾ ಚರ್ಚ್‌ನ ಸಂಪ್ರದಾಯಗಳನ್ನು ಅನುಸರಿಸುವುದನ್ನು ಬಯಸುವುದಿಲ್ಲ. ನಾವು ಸಾಂಪ್ರದಾಯಿಕ ಆದಿವಾಸಿ ನಿಯಮಗಳು ಮತ್ತು ಪದ್ಧತಿಗಳಿಗೆ ಬದ್ಧರಾಗಿರಬೇಕು ಎಂದು ಅವರು ಬಯಸುತ್ತಾರೆ. ನಾವು ಕ್ರೈಸ್ತ ಧರ್ಮವನ್ನು ತೊರೆದರೆ ನನ್ನ ತಂಗಿಯನ್ನು ಹೂಳಲು ಅವಕಾಶ ನೀಡುವುದಾಗಿ ಅವರು ಹೇಳಿದ್ದರು. ಈ ಸಮಸ್ಯೆಯು ಈಗ ಪ್ರತಿಯೊಂದೂ ಗ್ರಾಮದಲ್ಲಿ ವ್ಯಾಪಕವಾಗಿದೆ ’ ಎಂದು thewire.in ಸುದ್ದಿಸಂಸ್ಥೆಯೊಂದಿಗೆ ಮಾತನಾಡಿದ ಸುನೀತಾಳ ಸೋದರ ಮನುಪೋತೈ ತಿಳಿಸಿದರು.
ಆದಿವಾಸಿಗಳು ಬಹುಸಂಖ್ಯಾಕರಾಗಿರುವ ಬಸ್ತರ್ ಪ್ರದೇಶದಲ್ಲಿ ಹಲವರು ಕ್ರೈಸ್ತ ಧರ್ಮಕ್ಕೆ ಮತಾಂತರಗೊಂಡಿದ್ದಾರೆ. ಆದರೆ ಅವರು ಇತರ ಗ್ರಾಮಸ್ಥರಿಂದ ಹೆಚ್ಚುತ್ತಿರುವ ದಾಳಿಗಳನ್ನು ಎದುರಿಸುತ್ತಿದ್ದಾರೆ. ಈ ಗ್ರಾಮಸ್ಥರಲ್ಲಿ ಕೆಲವರು ಹಿಂದುತ್ವ ಗುಂಪುಗಳ ಬೆಂಬಲವನ್ನು ಹೊಂದಿದ್ದಾರೆ. ಅವರು ಆದಿವಾಸಿ ಪದ್ಧತಿಗಳು ಮತ್ತು ಸಂಪ್ರದಾಯಗಳನ್ನು ಹಿಂದು ಧರ್ಮದೊಂದಿಗೆ ಸಮೀಕರಿಸುತ್ತಾರೆ,ಹೀಗಾಗಿ ಹಿಂದುಯೇತರ ಆಚರಣೆಗಳನ್ನು ನಿಷೇಧಿಸುತ್ತಿದ್ದಾರೆ ಎಂದು thewire.in ವರದಿ ಮಾಡಿದೆ.
ಕ್ರೈಸ್ತರು ಮೂಲಧರ್ಮಕ್ಕೆ ಮರಳಬೇಕು ಎಂದು ಹೇಳಿದ ಗ್ರಾಮದ ಧಾರ್ಮಿಕ ವ್ಯವಹಾರಗಳನ್ನು ನೋಡಿಕೊಳ್ಳುವ ದೇವಸಮಿತಿಯ ಸದಸ್ಯ ಸಂತುರಾಮ, ‘ನೀವು ಸನಾತನ ಧರ್ಮದಲ್ಲಿ ಉಳಿಯದಿದ್ದರೆ ನೀವು ಧಾರ್ಮಿಕ ಪದ್ಧತಿಗಳನ್ನು ಉಲ್ಲಂಘಿಸುತ್ತಿದ್ದೀರಿ. ನಮ್ಮ ಗ್ರಾಮವು ಸೂಕ್ತ ಪದ್ಧತಿಗಳು ಮತ್ತು ಸಂಪ್ರದಾಯಗಳನ್ನು ಪಾಲಿಸಬೇಕು ಎಂದು ನಾವು ಬಯಸುತ್ತೇವೆ. ಗ್ರಾಮದಲ್ಲಿ ‘ದೇವ ರೀತಿ’ಯನ್ನು ಪಾಲಿಸುವ ಅಗತ್ಯವಿದೆ. ನಾನು ಯಾರನ್ನೂ ವಿರೋಧಿಸುತ್ತಿಲ್ಲ. ಅವರು ನಮ್ಮ ಸೋದರರು-ಸೋದರಿಯರಾಗಿದ್ದಾರೆ, ಅವರು ಮೂಲಧರ್ಮಕ್ಕೆ ಮತ್ತು ನಮ್ಮ ‘ದೇವ ರೀತಿ ’ಗೆ ಮರಳಬೇಕು ಎಂದು ನಾವು ಬಯಸುತ್ತೇವೆ’ಎಂದರು.