ಸುಪ್ರೀಂ ಕೋರ್ಟ್ ನ ಇಬ್ಬರು ಹೊಸ ನ್ಯಾಯಾಧೀಶರಿಗೆ ಪ್ರಮಾಣವಚನ ಬೋಧಿಸಿದ ಭಾರತದ ಮುಖ್ಯ ನ್ಯಾಯಮೂರ್ತಿ ಚಂದ್ರಚೂಡ್
ಹೊಸದಿಲ್ಲಿ: ಸುಪ್ರೀಂ ಕೋರ್ಟ್ ನ ನ್ಯಾಯಮೂರ್ತಿಗಳಾಗಿ ನ್ಯಾಯಮೂರ್ತಿ ಉಜ್ಜಲ್ ಭುಯಾನ್ ಹಾಗೂ ನ್ಯಾಯಮೂರ್ತಿ ಎಸ್. ವೆಂಕಟನಾರಾಯಣ ಭಟ್ಟಿ ಅವರಿಗೆ ಭಾರತದ ಮುಖ್ಯ ನ್ಯಾಯಮೂರ್ತಿ (ಸಿಜೆಐ) ಡಿ.ವೈ. ಚಂದ್ರಚೂಡ್ ಅವರು ಶುಕ್ರವಾರ ಪ್ರಮಾಣ ವಚನ ಬೋಧಿಸಿದರು.
ನ್ಯಾಯಮೂರ್ತಿಗಳಾದ ಭುಯಾನ್ ಹಾಗೂ ಭಟ್ಟಿ ಅವರ ಪ್ರಮಾಣ ವಚನ ಸ್ವೀಕಾರದೊಂದಿಗೆ ಸುಪ್ರೀಂ ಕೋರ್ಟ್ ನಲ್ಲಿ ನ್ಯಾಯಾಧೀಶರ ಕಾರ್ಯ ಶಕ್ತಿ ಸಿಜೆಐ ಸೇರಿದಂತೆ 32 ಕ್ಕೆ ಏರಿದೆ. ಇನ್ನೂ ಎರಡು ಸ್ಥಾನ ಖಾಲಿ ಇದೆ.
ಇಲ್ಲಿನ ಸುಪ್ರೀಂ ಕೋರ್ಟ್ ಸಭಾಂಗಣದಲ್ಲಿ ನಡೆದ ಪ್ರಮಾಣ ವಚನ ಸ್ವೀಕಾರ ಸಮಾರಂಭದಲ್ಲಿ ಸಿಜೆಐ ಅವರು ಇಬ್ಬರು ನೂತನ ನ್ಯಾಯಮೂರ್ತಿಗಳಿಗೆ ಪ್ರಮಾಣ ವಚನ ಬೋಧಿಸಿದರು.
ತೆಲಂಗಾಣ ಹೈಕೋರ್ಟ್ನ ಮುಖ್ಯ ನ್ಯಾಯಮೂರ್ತಿಯಾಗಿದ್ದ ಜಸ್ಟಿಸ್ ಭುಯಾನ್ ಹಾಗೂ ಕೇರಳ ಹೈಕೋರ್ಟ್ ಮುಖ್ಯ ನ್ಯಾಯಮೂರ್ತಿ ಭಟ್ಟಿ ಅವರ ಹೆಸರನ್ನು ಸುಪ್ರೀಂ ಕೋರ್ಟ್ನ ನ್ಯಾಯಮೂರ್ತಿಗಳಾಗಿ ಉನ್ನತೀಕರಿಸಲು ಕೇಂದ್ರ ಸರಕಾರವು ಜುಲೈ 12 ರಂದು ಅನುಮೋದಿಸಿತ್ತು.
ಕಾನೂನು ಸಚಿವ ಅರ್ಜುನ್ ರಾಮ್ ಮೇಘವಾಲ್ ಅವರು ಇಬ್ಬರು ನ್ಯಾಯಮೂರ್ತಿಗಳ ಪದೋನ್ನತಿಯನ್ನು ಬುಧವಾರ ಪ್ರಕಟಿಸಿದ್ದರು.
ಸಿಜೆಐ ನೇತೃತ್ವದ ಸುಪ್ರೀಂ ಕೋರ್ಟ್ ಕೊಲಿಜಿಯಂ ಜುಲೈ 5 ರಂದು ಅವರನ್ನು ಸುಪ್ರೀಂ ಕೋರ್ಟ್ ನ ನ್ಯಾಯಮೂರ್ತಿಗಳಾಗಿ ನೇಮಕ ಮಾಡಲು ಭುಯಾನ್ ಹಾಗೂ ಭಟ್ಟಿ ಹೆಸರನ್ನು ಶಿಫಾರಸು ಮಾಡಿತ್ತು.