ಪಾಕಿಸ್ತಾನಕ್ಕೆ ರವಾನೆಯಾಗುತ್ತಿದ್ದ ಚೀನಿ ‘ಪರಮಾಣು’ ಸರಕು ಮುಂಬಯಿ ಬಂದರಿನಲ್ಲಿ ಮುಟ್ಟುಗೋಲು

Update: 2024-03-02 15:49 GMT

Photo: PTI 

ಹೊಸದಿಲ್ಲಿ: ಪಾಕಿಸ್ತಾನದ ಅಣ್ವಸ್ತ್ರ ಹಾಗೂ ಪ್ರಕ್ಷೇಪಕ ಕ್ಷಿಪಣಿ ನಿರ್ಮಾಣಕ್ಕೆ ಬಳಸಬಹುದಾದಂತಹ ಸಾಮಾಗ್ರಿಗಳನ್ನು ಸಾಗಿಸುತ್ತಿವೆಯೆಂದು ಶಂಕಿಸಲಾದ ಹಡಗೊಂದನ್ನು ಮುಂಬಯಿಯ ನವಶೇವಾ ಬಂದರಿನಲ್ಲಿ ಭಾರತೀಯ ಕಸ್ಟಮ್ಸ್ ಅಧಿಕಾರಿಗಳು ಕಳೆದ ತಿಂಗಳ ಜನವರಿಯಲ್ಲಿ ವಶಕ್ಕೆ ತೆಗೆದುಕೊಂಡಿದ್ದಾರೆ. ಈ ಹಡಗಿನಲ್ಲಿರುವ ಸರಕನ್ನು ಚೀನಾದಲ್ಲಿ ಲೋಡ್ ಮಾಡಲಾಗಿತ್ತು. ಪಾಕಿಸ್ತಾನವು ತನ್ನ ಗುರುತು ಪತ್ತೆಯಾಗುವುದನ್ನು ತಪ್ಪಿಸಲು ಯುರೋಪ್ ಹಾಗೂ ಅಮೆರಿಕದಿಂದ ನಿರ್ಬಂಧಿತ ಸಾಮಾಗ್ರಿಗಳನ್ನು ಖರೀದಿಸಲು ಚೀನಾವನ್ನು ಮಧ್ಯವರ್ತಿಯಾಗಿ ಬಳಸಿಕೊಂಡಿದೆ ಎಂದು ಶಂಕಿಸಲಾಗಿದೆ.

ಜನವರಿ 23ರಂದು ಕಸ್ಟಮ್ಸ್ ಅಧಿಕಾರಿಗಳು ಮುಂಬಯಿಯ ನವಾ ಶೇವಾ ಬಂದರಿನಲ್ಲಿ ಮಾಲ್ಟಾ ಧ್ವಜಧಾರಿ ವಾಣಿಜ್ಯ ನೌಕೆಯೊಂದನ್ನು ತಡೆದು ನಿಲ್ಲಿಸಿದ್ದರು.

ಕೂಡಲೇ ಬಂದರು ಅಧಿಕಾರಿಗಳು ಈ ಬಗ್ಗೆ ಭಾರತೀಯ ರಕ್ಷಣಾ ಇಲಾಖೆಯ ಅಧಿಕಾರಿಗಳನ್ನು ಕಟ್ಟೆಚ್ಚರದಲ್ಲಿರಿಸಿದರು ಹಾಗೂ ಅದರಲ್ಲಿರುವ ಶಂಕಾಸ್ಪದ ಸಾಮಾಗ್ರಿಗಳ ಬಗ್ಗೆ ವರದಿ ಸಲ್ಲಿಸಿದ್ದರು. ಆನಂತರ ಹಡಗಿನಲ್ಲಿದ್ದ ಸಾಮಾಗ್ರಿಗಳನ್ನು ಮುಟ್ಟುಗೋಲು ಹಾಕಲಾಗಿದೆ.

ಈ ಹಡಗು ಚೀನಾದ ಶೆಕಾವು ಬಂದರಿನಿಂದ ಸರಂಜಾಮುಗಳನ್ನು ಹೇರಿತ್ತು ಹಾಗೂ ಇಟಲಿಯ ಕಂಪೆನಿಯೊಂದರ ಮಾಲಕತ್ವದ ಈ ಹಡಗು ಸಿಎನ್ಸಿ (ಕಂಪ್ಯೂಟರ್ ನ್ಯೂಮೆರಿಕಲ್ ಕಂಟ್ರೋಲ್) ಎಂಬ ಯಂತ್ರವನ್ನು ಕೊಂಡೊಯ್ಯುತ್ತಿತ್ತು. ಮೂಲಭೂತವಾಗಿ ಇಂತಹ ಯಂತ್ರಗಳನ್ನು ಕಂಪ್ಯೂಟರ್ ಮೂಲಕ ನಿಯಂತ್ರಿಸಲಾಗುತ್ತಿದೆ ಹಾಗೆಯೇ ದಕ್ಷತೆ, ಸ್ಥಿರತೆ ಹಾಗೂ ನಿಖರತೆಯನ್ನು ಅಳೆಯಲು ಅದನ್ನು ಬಳಸಲಾಗುತ್ತಿದೆ.

ಬಂದರು ಅಧಿಕಾರಿಗಳು ಸಲ್ಲಿಸಿದ ಹಡಗಿಗೆ ಸಂಬಂಧಿಸಿದ ಅಧಿಕೃತ ದಾಖಲೆಗಳನ್ನು ಪರಿಶೀಲಿಸಿದ ಬಳಿಕ ಕಸ್ಟಮ್ಸ್ ಅಧಿಕಾರಿಗಳು ಜಾಗೃತಗೊಂಡರು. ಲೋಡಿಂಗ್ (ಸರಕು ಹೇರಿಕೆ) ಬಿಲ್ ಗಳು ಹಾಗೂ ಮತ್ತಿತರ ಸಾಗಣೆಯ ವಿವರಗಳಲ್ಲಿ ಲಭ್ಯವಾದ ಮಾಹಿತಿಗಳ ಪ್ರಕಾರ, ಸರಕುಸಾಗಾಟದ ಹಡಗು ಸಂಸ್ಥೆಯನ್ನು ‘ಶಾಂಘೈ ಜೆಎಕ್ಸ್ಇ ಗ್ಲೋಬಲ್ ಲಾಜಿಸ್ಟಿಕ್ಸ್ ಕಂಪೆನಿ ಲಿಮಿಟೆಡ್ ಎಂದು ಉಲ್ಲೇಖಿಸಲಾಗಿತ್ತು ಹಾಗೂ ಸರಕು ರವಾನೆದಾರನನ್ನು ಸಿಯಾಲ್ಕೋಟ್ನ ‘ಪಾಕಿಸ್ತಾನ್ ವಿಂಗ್ಸ್ ಪ್ರೈವೇಟ್ ಲಿಮಿಟೆಡ್’ ಎಂದು ಗುರುತಿಸಲಾಗಿತ್ತು.

22,180 ಕೆ.ಜಿ.ಭಾರದ ಈ ಸರಕನ್ನು ‘ಟೈಯುವಾನ್ ಮೈನಿಂಗ್ ಇಂಪೋರ್ಟ್ ಆ್ಯಂಡ್ ಎಕ್ಸ್ಪೋರ್ಟ್ ಕಂಪೆನಿ ಲಿಮಿಟೆಡ್’ ಮೂಲಕ ಪಾಕಿಸ್ತಾನದ ‘ಕೊಸ್ಮೊಸ್ ಎಂಜಿನಿಯರಿಂಗ್ ’ಸಂಸ್ಥೆಗೆ ರವಾನೆಯಾಗಲಿತ್ತು.

ಹಡಗಿನಲ್ಲಿರುವ ಈ ಥರ್ಮೊ ಇಲೆಕ್ಟ್ರಿಕ್ ಉಪಕರಣಗಳನ್ನು ಪಾಕಿಸ್ತಾನದ ಯುರೇನಿಯಂ ಸಂವರ್ಧನೆ ಸಂಸ್ಥೆಗೆ ಸಾಗಾಟವಾಗುತ್ತಿತ್ತು ಎಂದು ಶಂಕಿಸಲಾಗಿದೆ. ಈ ಸರಕಿನ ಮೂಲ ರವಾನೆದಾರನಾದ ಕೊಸ್ಮೊಸ್ ಎಂಜಿನಿಯರಿಂಗ್ ನ ಹೆಸರನ್ನು ಬಚ್ಚಿಡಲು ದುರುದ್ದೇಶಪೂರ್ವಕವಾಗಿ ಪಾಕಿಸ್ತಾನ್ ವಿಂಗ್ಸ್ ಸಂಸ್ಥೆಯನ್ನು ಸರಕು ಸಾಗಣೆದಾರನೆಂದು ಹೆಸರಿಸಿರಬೇಕೆಂದು ಶಂಕಿಸಲಾಗಿದೆ.

ಜಗತ್ತಿನ ವಿವಿಧ ಭಾಗಗಳಿಂದ ಅವಳಿ ಬಳಕೆಯ ಹಾಗೂ ನಿರ್ಬಂಧಿತ ಸಾಮಾಗ್ರಿಗಳ ಸಾಗಾಟಕ್ಕೆ ಅವಕಾಶವಾಗುವಂತೆ ಮಾಡುವುದಕ್ಕಾಗಿ ‘ಪಾಕಿಸ್ತಾನದ ಸೇನೆಯು ಪಾಕಿಸ್ತಾನ್ ವಿಂಗ್ಸ್ ನ ಸೇವೆಗಳನ್ನು ಬಳಸಿಕೊಳ್ಳುತ್ತಿದೆ’ ಎಂದು ಭಾರತೀಯ ಅಧಿಕಾರಿಗಳು ಬಹಳ ಸಮಯದ ಹಿಂದಿನಿಂದಲೂ ಶಂಕಿಸುತ್ತಲೇ ಬಂದಿದ್ದರು.

ಪಾಕಿಸ್ತಾನದ ಅಣ್ವಸ್ತ್ರ ಹಾಗೂ ಕ್ಷಿಪಣಿ ಕಾರ್ಯಕ್ರಮಕ್ಕೆ ಚೀನಾವು ಬೆಂಬಲ ನೀಡುತ್ತಾ ಬಂದಿರುವುದು ತೀವ್ರ ಕಳವಳಕಾರಿಯಾದ ವಿಷಯವೆಂದು ಭಾರತೀಯ ಅಧಿಕಾರಿಗಳು ಹೇಳಿದ್ದಾರೆ.

Tags:    

Writer - ವಾರ್ತಾಭಾರತಿ

contributor

Editor - Ismail

contributor

Byline - ವಾರ್ತಾಭಾರತಿ

contributor

Similar News