ನ್ಯಾಯಾಲಯದ ಕೊಠಡಿಗಳಲ್ಲಿ ಮಹಿಳೆಯರ ವಿರುದ್ಧ ಅವಹೇಳನಕಾರಿ ಭಾಷೆಗೆ ಜಾಗವಿಲ್ಲ : ಸಿಜೆಐ ಚಂದ್ರಚೂಡ್ ಎಚ್ಚರಿಕೆ

Update: 2024-10-19 14:14 GMT

ಮುಖ್ಯ ನ್ಯಾಯಮೂರ್ತಿ ಡಿ.ವೈ.ಚಂದ್ರಚೂಡ್ | PTI 

ಪಣಜಿ : ನ್ಯಾಯಾಲಯದ ಕೊಠಡಿಗಳಲ್ಲಿ, ವಿಶೇಷವಾಗಿ ಮಹಿಳೆಯರ ವಿರುದ್ಧದ ಅವಹೇಳನಕಾರಿ ಭಾಷೆಗೆ ಯಾವುದೇ ಜಾಗವಿಲ್ಲ ಎಂದು ಮುಖ್ಯ ನ್ಯಾಯಮೂರ್ತಿ ಡಿ.ವೈ.ಚಂದ್ರಚೂಡ್ ಎಚ್ಚರಿಸಿದ್ದಾರೆ. ಇಂತಹ ಅಸೂಕ್ಷ್ಮ ಪದಗಳು ಏಕತಾನತೆಯನ್ನು ಸೃಷ್ಟಿಸಬಹುದು ಹಾಗೂ ಮಹಿಳೆಯರು ಮತ್ತು ಅಂಚಿನ ಸಮುದಾಯಗಳ ಮೇಲೆ ಅಸಮತೋಲಿತ ಪ್ರಭಾವ ಬೀರಬಹುದು ಎಂದು ಅವರು ಅಭಿಪ್ರಾಯಪಟ್ಟಿದ್ದಾರೆ.

ಪಣಜಿಯಲ್ಲಿ ನಿರ್ಮಿಸಲಾಗಿರುವ ಉತ್ತರ ಗೋವಾ ಜಿಲ್ಲಾ ನ್ಯಾಯಾಲಯಗಳ ಸಂಕೀರ್ಣದ ಉದ್ಘಾಟನಾ ಕಾರ್ಯಕ್ರಮವನ್ನುದ್ದೇಶಿಸಿ ಮಾತನಾಡಿದ ಅವರು, “ನ್ಯಾಯಕ್ಕೆ ನೈಜ ಪ್ರಜಾಸತ್ತಾತ್ಮಕ ಪ್ರವೇಶವನ್ನು ಒದಗಿಸಲು ನಾವೆಲ್ಲ ಕ್ರಿಯಾಶೀಲವಾಗಿ ಅದಕ್ಕಿರುವ ಎಲ್ಲ ತಡೆಗೋಡೆಗಳನ್ನು ತೊಡೆದು ಹಾಕಬೇಕು” ಎಂದು ಕರೆ ನೀಡಿದರು.

“ನಾವು ನಮ್ಮ ನ್ಯಾಯಾಲಯದ ಕೊಠಡಿಗಳಲ್ಲಿ ಒಳಗೊಳ್ಳುವಿಕೆಗೆ ಪ್ರಯತ್ನಿಸುವುದರಿಂದ, ನಾವು ಬಳಸುವ ಭಾಷೆಯು ನಮ್ಮ ನೈತಿಕತೆಯನ್ನು ಪ್ರತಿಬಿಂಬಿಸಲೇಬೇಕು. ನಾವು ನಮ್ಮ ಪದಗಳ ಆಯ್ಕೆಯಲ್ಲಿ ಎಚ್ಚರಿಕೆ ವಹಿಸುವ ಮೂಲಕ ನಮ್ಮ ಭಾಷೆಯು ಕೇವಲ ಅಮೂಲ್ಯ ಮಾತ್ರವಲ್ಲ, ಗೌರವಯುತ ಮತ್ತು ತಾಕುವ ಭಾಷೆಯಾಗಿರುವುದನ್ನು ಖಾತರಿ ಪಡಿಸಬೇಕು” ಎಂದು ಮುಖ್ಯ ನ್ಯಾಯಮೂರ್ತಿ ಡಿ.ವೈ.ಚಂದ್ರಚೂಡ್ ಕಿವಿಮಾತು ಹೇಳಿದರು.

ಆಡಳಿತಾತ್ಮಕ ವಿಭಾಗಗಳಲ್ಲಿ ಮಹಿಳೆಯರ ವಿರುದ್ಧ ಕೆಲವು ಸದಸ್ಯರು ಅವಹೇಳನಕಾರಿ ಭಾಷೆಯನ್ನು ಬಳಸುತ್ತಿದ್ದಾರೆ ಎಂಬ ಮಹಿಳಾ ನ್ಯಾಯಾಂಗ ಅಧಿಕಾರಿಗಳ ದೂರುಗಳನ್ನು ಉಲ್ಲೇಖಿಸಿ ಅವರು ಕಿವಿಮಾತು ಹೇಳಿದರು.

Tags:    

Writer - ವಾರ್ತಾಭಾರತಿ

contributor

Editor - Ismail

contributor

Byline - ವಾರ್ತಾಭಾರತಿ

contributor

Similar News