ಆಯುಷ್ಮಾನ್ ಭಾರತ್ ಯೋಜನೆ ಹಗರಣ: 21 ಸ್ಥಳಗಳಲ್ಲಿ ಈಡಿ ದಾಳಿ

ಸಾಂದರ್ಭಿಕ ಚಿತ್ರ | PC : PTI
ರಾಂಚಿ: ಆಯುಷ್ಮಾನ್ ಭಾರತ್ ಯೋಜನೆ ಹಗರಣದಲ್ಲಿ ಹಣ ಅಕ್ರಮ ವರ್ಗಾವಣೆ ಆರೋಪಕ್ಕೆ ಸಂಬಂಧಿಸಿ ಜಾರಿ ನಿರ್ದೇಶನಾಲಯ 21 ಸ್ಥಳಗಳಲ್ಲಿ ದಾಳಿ ನಡೆಸಿದೆ.
ಜಾರ್ಖಂಡ್‌ನ ಮಾಜಿ ಆರೋಗ್ಯ ಸಚಿವ ಬನ್ನಾ ಗುಪ್ತಾ ಅವರ ಆಪ್ತ ಕಾರ್ಯದರ್ಶಿ (ಪಿಎಸ್) ಓಂ ಪ್ರಕಾಶ್, ಥರ್ಡ್ ಪಾರ್ಟಿ ಅಸ್ಸೆಸ್‌ಮೆಂಟ್ (ಟಿಪಿಎ) ಹಾಗೂ ಇತರರಿಗೆ ಸೇರಿದ ಸ್ಥಳಗಳಲ್ಲಿ ದಾಳಿ ನಡೆಸಲಾಗಿದೆ ಎಂದು ಜಾರಿ ನಿರ್ದೇಶನಾಲಯದ ಮೂಲಗಳು ತಿಳಿಸಿವೆ.
ಅಶೋಕ್ ನಗರ್, ಪಿ.ಪಿ. ಕಂಪೌಂಡ್, ಎದಾಲ್‌ಹಾತು, ಬರಿಯಾತು, ಲಾಲ್‌ಪುರ ಹಾಗೂ ಚಿರೌಂಡಿ ಸೇರಿದಂತೆ ರಾಂಚಿಯ ಹಲವು ಸ್ಥಳಗಳಲ್ಲಿ ಶುಕ್ರವಾರ ಬೆಳಗ್ಗಿನಿಂದ ಶೋಧ ಕಾರ್ಯಾಚರಣೆ ನಡೆಸಲಾಗಿದೆ. ಜಾರ್ಖಂಡ್‌ನಲ್ಲಿ 17, ಪಶ್ಚಿಮ ಬಂಗಾಳದಲ್ಲಿ 2, ದಿಲ್ಲಿ ಹಾಗೂ ಉತ್ತರಪ್ರದೇಶದಲ್ಲಿ ತಲಾ ಒಂದು ಸೇರಿದಂತೆ ಒಟ್ಟು 21 ಸ್ಥಳಗಳಲ್ಲಿ ದಾಳಿ ನಡೆಸಲಾಗಿದೆ ಎಂದು ಅವು ತಿಳಿಸಿವೆ.
ಆಯುಷ್ಮಾನ್ ಭಾರತ್ ಯೋಜನೆಯಲ್ಲಿ ನಡೆದ ಭ್ರಷ್ಟಾಚಾರ ಬಗ್ಗೆ ಬೆಳಕು ಚೆಲ್ಲುವ ವರದಿಯನ್ನು ಮಹಾಲೇಖಪಾಲರು (ಸಿಎಜಿ) ಸಂಸತ್ತಿನಲ್ಲಿ ಪ್ರಸ್ತುತಪಡಿಸಿದ್ದರು. ಅನಂತರ ಈ ವರದಿಯಲ್ಲಿ ಉಲ್ಲೇಖಿಸಿದ ವಿವರಗಳ ಆಧಾರದಲ್ಲಿ ಜಾರಿ ನಿರ್ದೇಶನಾಲಯ ಆಯುಷ್ಮಾನ್ ಭಾರತ್ ಯೋಜನೆ ಅಡಿಯಲ್ಲಿ ನಡೆದ ಅಕ್ರಮಗಳಲ್ಲಿ ಭಾಗಿಯಾದವರ ವಿರುದ್ಧ ತೆಗೆದುಕೊಂಡ ಕ್ರಮಗಳಿಗೆ ಸಂಬಂಧಿಸಿ ಆರೋಗ್ಯ ಇಲಾಖೆ ಹಾಗೂ ಜಾರ್ಖಂಡ್ ರಾಜ್ಯ ಆರೋಗ್ಯ ಸೊಸೈಟಿಯಿಂದ ಮಾಹಿತಿ ಕೋರಿತ್ತು.
ಇದಕ್ಕೆ ಪ್ರತಿಕ್ರಿಯೆಯಾಗಿ ಆರೋಗ್ಯ ಇಲಾಖೆ ಆಯುಷ್ಮಾನ್ ಯೋಜನೆಯಲ್ಲಿ ನಡೆದ ಅಕ್ರಮಗಳಿಗೆ ಸಂಬಂಧಿಸಿ ನಿರ್ದಿಷ್ಟ ಆಸ್ಪತ್ರೆಗಳ ವಿರುದ್ಧ ದಾಖಲಿಸಲಾದ ಎಫ್‌ಐಆರ್‌ನ ವಿವರವನ್ನು ಜಾರಿ ನಿರ್ದೇಶನಾಲಯಕ್ಕೆ ನೀಡಿತ್ತು.
ಈ ಎಫ್‌ಐಆರ್‌ನ ಆಧಾರದಲ್ಲಿ ಜಾರಿ ನಿರ್ದೇಶನಾಲಯ ಇಸಿಐರ್ ದಾಖಲಿಸಿತ್ತು ಹಾಗೂ ಆಯುಷ್ಮಾನ್ ಭಾರತ್ ಹಗರಣದ ಕುರಿತು ಜಾರ್ಖಂಡ್‌ನಲ್ಲಿ ತನಿಖೆ ಆರಂಭಿಸಿತ್ತು. ತನಿಖೆ ವೇಳೆ ಬೆಳಕಿಗೆ ಬಂದ ಅಂಶಗಳ ಹಿನ್ನೆಲೆಯಲ್ಲಿ ಜಾರಿ ನಿರ್ದೇಶನಾಲಯ ಪ್ರಕರಣಕ್ಕೆ ಸಂಬಂಧಿಸಿದವರಿಗೆ ಸೇರಿದ ಸ್ಥಳಗಳ ಮೇಲೆ ಶುಕ್ರವಾರ ದಾಳಿ ನಡೆಸಿದೆ.