ನಾವು ಐಸ್ಕ್ರೀಂ ಅಥವಾ ಚಿಪ್ಸ್ ತಯಾರಿಸಬೇಕೇ ಎಂದು ಸ್ಟಾರ್ಟ್ಅಪ್ ಗಳನ್ನು ಟೀಕಿಸಿದ ಪಿಯೂಷ್ ಗೋಯಲ್ ಗೆ ಉದ್ಯಮಿಗಳ ತರಾಟೆ

Update: 2025-04-04 20:17 IST
Piyush Goyal

ಪಿಯೂಷ್ ಗೋಯಲ್ | PC : PTI  

  • whatsapp icon

ಹೊಸದಿಲ್ಲಿ: ಕೇಂದ್ರ ಸಚಿವ ಪಿಯೂಷ್ ಗೋಯಲ್ ಅವರು ಸ್ಟಾರ್ಟ್ಅಪ್ ಗಳು ಸಾಗುತ್ತಿರುವ ದಿಕ್ಕು ಮತ್ತು ಅವುಗಳ ಗುರಿಯನ್ನು ಪ್ರಶ್ನಿಸಿದ ಬಳಿಕ ಭಾರತದ ಸ್ಟಾರ್ಟ್ಅಪ್ ಪರಿಸರ ವ್ಯವಸ್ಥೆಯ ರಕ್ಷಣೆಗೆ ಈ ನವೋದ್ಯಮಗಳ (ಸ್ಟಾರ್ಟ್ಅಪ್) ಸ್ಥಾಪಕರು ಮತ್ತು ನಾಯಕರು ಮುಂದಾಗಿದ್ದಾರೆ. ಭಾರತದ ನವೋದ್ಯಮ ಪರಿಸರ ವ್ಯವಸ್ಥೆಯು ವಿಶ್ವದಲ್ಲಿ ಅಮೆರಿಕ ಮತ್ತು ಚೀನಾದ ನಂತರ ಮೂರನೇ ಅತಿದೊಡ್ಡದು ಎಂಬ ಹೆಗ್ಗಳಿಕೆ ಹೊಂದಿದ್ದರೂ, ಗೋಯಲ್ ಭಾರತೀಯ ಸ್ಟಾರ್ಟ್ಅಪ್ಗಳು ಪ್ರಸ್ತುತ ಸಾಗುತ್ತಿರುವ ದಿಕ್ಕನ್ನು ಟೀಕಿಸಿದ್ದಾರೆ.

ಹೆಚ್ಚಿನ ಭಾರತೀಯ ನವೋದ್ಯಮಗಳು ಫುಡ್ ಡೆಲಿವರಿ, ಬೆಟ್ಟಿಂಗ್ ಮತ್ತು ಫ್ಯಾಂಟಸಿ ಕ್ರೀಡೆಗಳ ಮೇಲೆ ಗಮನ ಕೇಂದ್ರೀಕರಿಸಿದ್ದರೆ ಚೀನಿ ಸ್ಟಾರ್ಟ್ಅಪ್ ಗಳು ವಿದ್ಯುತ್ ವಾಹನಗಳು, ಬ್ಯಾಟರಿ ತಂತ್ರಜ್ಞಾನ, ಸೆಮಿಕಂಡಕ್ಟರ್ ಗಳು ಮತ್ತು ಕೃತಕ ಬುದ್ಧಿಮತ್ತೆ (ಎಐ) ಕ್ಷೇತ್ರದಲ್ಲಿ ಕಾರ್ಯನಿರ್ವಹಿಸುತ್ತಿವೆ ಎಂದು ತನ್ನ ಭಾಷಣದಲ್ಲಿ ಬೆಟ್ಟು ಮಾಡಿದ್ದ ಗೋಯಲ್, ‘ನಾವು ಐಸ್ಕ್ರೀಂ ಅಥವಾ ಚಿಪ್ಸ್ ತಯಾರಿಸಬೇಕೇ? ಕೇವಲ ದುಕಾನ್ದಾರಿ(ಅಂಗಡಿ ವ್ಯಾಪಾರ)ಯನ್ನು ಮಾಡಲು ಬಯಸುತ್ತಿದ್ದೇವೆಯೇ?’ ಎಂದು ಪ್ರಶ್ನಿಸಿದ್ದರು. ಪ್ರಮುಖ ತಂತ್ರಜ್ಞಾನಗಳಲ್ಲಿ ಆಳವಾದ ನವೀನತೆ ಮತ್ತು ದೀರ್ಘಾವಧಿಯ ಪ್ರಗತಿಯನ್ನು ಗುರಿಯಾಗಿಸಿಕೊಳ್ಳುವ ಬದಲು ಗಿಗ್ ಉದ್ಯೋಗಗಳನ್ನು ಸೃಷ್ಟಿಸುವುದರಲ್ಲಿಯೇ ದೇಶವು ತೃಪ್ತಗೊಂಡಿದೆಯೇ ಎಂದೂ ಗೋಯಲ್ ಪ್ರಶ್ನಿಸಿದ್ದರು.

ಗೋಯಲ್ ಅವರ ಈ ಹೇಳಿಕೆಗಳಿಗೆ ನವೋದ್ಯಮ ಮತ್ತು ತಂತ್ರಜ್ಞಾನ ಜಗತ್ತಿನ ಗಣ್ಯರು ತೀಕ್ಷ್ಣವಾಗಿ ಪ್ರತಿಕ್ರಿಯಿಸಿದ್ದಾರೆ.

ಚೀನಾದೊಂದಿಗೆ ಹೋಲಿಕೆ ನ್ಯಾಯಯುತವಲ್ಲ, ಅದರಿಂದೇನೂ ಪ್ರಯೋಜನವಿಲ್ಲ ಎಂದು ಹೇಳಿರುವ ಇನ್ಫೋಸಿಸ್ ನ ಮಾಜಿ ಸಿಎಫ್ಒ ಮತ್ತು ಪ್ರಮುಖ ಹೂಡಿಕೆದಾರ ಮೋಹನದಾಸ ಪೈ ಅವರು, ಭಾರತದಲ್ಲಿ ಡೀಪ್ ಟೆಕ್ ನ ಬೆಳವಣಿಗೆಯನ್ನು ನಿಧಾನಗೊಳಿಸುವಲ್ಲಿ ಸರಕಾರದ ನೀತಿಗಳ ಪಾತ್ರದ ಕುರಿತು ಕಳವಳಗಳನ್ನು ವ್ಯಕ್ತಪಡಿಸಿದ್ದಾರೆ.

‘ಇವೆಲ್ಲ ಕೆಟ್ಟ ಹೋಲಿಕೆಗಳಾಗಿವೆ. ಭಾರತವು ಆ ಎಲ್ಲ ಕ್ಷೇತ್ರಗಳಲ್ಲಿಯೂ ನವೋದ್ಯಮಗಳನ್ನು ಹೊಂದಿದೆ, ಆದರೆ ಅವೆಲ್ಲ ಸಣ್ಣ ಉದ್ಯಮಗಳಾಗಿವೆ. ಸಚಿವ ಗೋಯಲ್ ನಮ್ಮ ನವೋದ್ಯಮಗಳನ್ನು ಕೀಳಂದಾಜಿಸಬಾರದು, ಅದರೆ ನಮ್ಮ ಸಚಿವರಾಗಿ ಭಾರತದಲ್ಲಿ ಡೀಪ್ ಟೆಕ್ ಸ್ಟಾರ್ಟ್ಅಪ್ಗಳು ಬೆಳೆಯಲು ತಾನೇನು ಮಾಡಿದ್ದೇನೆ ಎಂದು ಸ್ವತಃ ಪ್ರಶ್ನಿಸಿಕೊಳ್ಳಬೇಕು’ ಎಂದು ಪೈ ಎಕ್ಸ್ ಪೋಸ್ಟ್ ನಲ್ಲಿ ಕುಟುಕಿದ್ದಾರೆ.

ಭಾರತದ ಹಣಕಾಸು ವ್ಯವಸ್ಥೆ ಮತ್ತು ನಿಯಂತ್ರಣಗಳು ತೊಡಕುಗಳನ್ನು ಸೃಷ್ಟಿಸುತ್ತಿವೆ ಎಂದೂ ಅವರು ದೂರಿದ್ದಾರೆ.

ಭಾರತೀಯ ನವೋದ್ಯಮ ಪರಿಸರ ವ್ಯವಸ್ಥೆಯನ್ನು ಟೀಕಿಸಿದ್ದಕ್ಕಾಗಿ ಗೋಯಲ್ ರನ್ನು ತರಾಟೆಗೆತ್ತಿಕೊಂಡಿರುವ ಮಾಜಿ ಭಾರತ ಪೇ ಸಹಸ್ಥಾಪಕ ಅಶ್ನೀರ್ ಗ್ರೋವರ್ ಅವರು, ಭಾರತದಲ್ಲಿ ಅದರ ರಾಜಕಾರಣಿಗಳು ಮಾತ್ರ ‘ರಿಯಾಲಿಟಿ ಚೆಕ್’ ಅಗತ್ಯವಾಗಿರುವ ಜನರಾಗಿದ್ದಾರೆ. ಉಳಿದವರೆಲ್ಲರೂ ಭಾರತದ ಸಂಪೂರ್ಣ ವಾಸ್ತವಿಕತೆಯಲ್ಲಿ ವಾಸಿಸುತ್ತಿದ್ದಾರೆ. ಚೀನಾ ಕೂಡ ಮೊದಲು ಫುಡ್ ಡೆಲಿವರಿಯನ್ನು ಮಾಡುತ್ತಿತ್ತು ಮತ್ತು ನಂತರ ಡೀಪ್ ಟೆಕ್ ಗೆ ವಿಕಸನಗೊಂಡಿತ್ತು. ಅವರು ಸಾಧಿಸಿದ್ದಕ್ಕಾಗಿ ಹಂಬಲಿಸುವುದು ಸರಿ. ಇದು ರಾಜಕಾರಣಿಗಳು ಇಂದಿನ ಉದ್ಯೋಗ ಸೃಷ್ಟಿಕರ್ತರನ್ನು ಟೀಕಿಸುವ ಬದಲು 20 ವರ್ಷಗಳ ಕಾಲ ಶೇ.10ಕ್ಕಿಂತ ಹೆಚ್ಚಿನ ಆರ್ಥಿಕ ಪ್ರಗತಿಗಾಗಿ ಹಂಬಲಿಸಬೇಕಾದ ಸಮಯ, ಬಹುಶಃ ಸಾರ್ವಜನಿಕ ಚರ್ಚೆಗಳನ್ನು ಇತಿಹಾಸದಿಂದ ವಿಜ್ಞಾನಕ್ಕೆ ಬದಲಿಸುವ ಸಮಯ. ಈ ಆರೋಗ್ಯಪೂರ್ಣ ಚರ್ಚೆಗೆ ಚಾಲನೆ ನೀಡಿದ್ದಕ್ಕಾಗಿ ಸಚಿವರಿಗೆ ಧನ್ಯವಾದಗಳು’ ಎಂದು ಸಾಮಾಜಿಕ ಮಾಧ್ಯಮ ಪೋಸ್ಟ್ ನಲ್ಲಿ ಹೇಳಿದ್ದಾರೆ.

Tags:    

Writer - ವಾರ್ತಾಭಾರತಿ

contributor

Editor - Ismail

contributor

Byline - ವಾರ್ತಾಭಾರತಿ

contributor

Similar News