ಸತ್ಯವನ್ನು ಸೋಲಿಸಲಾಗದು: ಪೋಕ್ಸೊ ಪ್ರಕರಣ ರದ್ದತಿ ಬಳಿಕ ಮುಹಮ್ಮದ್ ಝುಬೈರ್ ಪ್ರತಿಕ್ರಿಯೆ

ಮುಹಮ್ಮದ್ ಝುಬೈರ್ | PC : X \Mohammed Zubair, @zoo_bear
ಹೊಸದಿಲ್ಲಿ: ಸಾಮಾಜಿಕ ಜಾಲತಾಣ ಎಕ್ಸ್‌ನಲ್ಲಿ ಮಾಡಿದ ಪೋಸ್ಟ್‌ಗೆ ಸಂಬಂಧಿಸಿ ಆಲ್ಟ್ ನ್ಯೂಸ್ ಸಹ ಸಂಸ್ಥಾಪಕ ಮುಹಮ್ಮದ್ ಝುಬೈರ್ ವಿರುದ್ಧ ಛತ್ತೀಸ್‌ಗಢ ಪೊಲೀಸರು ದಾಖಲಿಸಿರುವ ಪೋಕ್ಸೊ ಪ್ರಕರಣದ ಕುರಿತು ʼಮುಕ್ತಾಯದ ವರದಿʼಯನ್ನು ಸಲ್ಲಿಸಲಾಗಿದೆ ಎಂದು ರಾಜ್ಯ ಸರಕಾರ ಛತ್ತೀಸ್‌ಗಢ ಹೈಕೋರ್ಟ್‌ಗೆ ತಿಳಿಸಿದೆ.
ಈ ಕುರಿತು 2020ರಲ್ಲಿ ಝುಬೈರ್ ವಿರುದ್ಧ ಮಾಹಿತಿ ತಂತ್ರಜ್ಞಾನ ಕಾಯಿದೆಯ ಸೆಕ್ಷನ್ 67, ಭಾರತೀಯ ದಂಡ ಸಂಹಿತೆಯ ಸೆಕ್ಷನ್ 509ಬಿ ಮತ್ತು ಪೋಕ್ಸೊ ಕಾಯ್ದೆಯ ಸೆಕ್ಷನ್ 12ರ ಅಡಿಯಲ್ಲಿ ಪ್ರಕರಣ ದಾಖಲಿಸಲಾಗಿತ್ತು. ಎಫ್ಐಆರ್ ಪ್ರಶ್ನಿಸಿ ಝುಬೈರ್ ಸಲ್ಲಿಸಿದ ಅರ್ಜಿಯನ್ನು ನ್ಯಾಯಾಲಯ ವಿಲೇವಾರಿ ನಡೆಸಿತು.
ಈ ಕುರಿತು ಛತ್ತೀಸ್‌ಗಢ ಹೈಕೋರ್ಟ್ ಮುಖ್ಯ ನ್ಯಾಯಮೂರ್ತಿ ರಮೇಶ್ ಸಿನ್ಹಾ ಮತ್ತು ನ್ಯಾಯಮೂರ್ತಿ ಅರವಿಂದ್ ಕುಮಾರ್ ವರ್ಮಾ ಅವರ ಪೀಠದ ಮುಂದೆ ಛತ್ತೀಸ್‌ಗಢ ಸರಕಾರದ ಪರ ವಕೀಲರು ವರದಿ ಸಲ್ಲಿಕೆ ಮಾಡಿದರು.
ಜಗದೀಶ್ ಸಿಂಗ್ ಎಂಬವರು ಎಕ್ಸ್‌ನಲ್ಲಿ ಮುಹಮ್ಮದ್ ಝುಬೈರ್ ಅವರನ್ನು ʼಜಿಹಾದಿʼ ಎಂದು ಪೋಸ್ಟ್ ಮಾಡಿದ್ದರು. ಅವರ ಎಕ್ಸ್ ಖಾತೆಯ ಪ್ರೊಫೈಲ್‌ನಲ್ಲಿ ಮೊಮ್ಮಗಳ ಫೋಟೊ ಕೂಡ ಇತ್ತು ಎಂದು ಹೇಳಲಾಗಿದೆ.
ಈ ಬಗ್ಗೆ ಪೋಸ್ಟ್ ಮಾಡಿದ್ದ ಝುಬೈರ್, ʼನಮಸ್ಕಾರ ಜಗದೀಶ್ ಸಿಂಗ್, ಸಾಮಾಜಿಕ ಜಾಲತಾಣದಲ್ಲಿ ಜನರನ್ನು ನಿಂದಿಸುವ ನಿಮ್ಮ ಅರೆಕಾಲಿಕ ಕೆಲಸದ ಬಗ್ಗೆ ನಿಮ್ಮ ಮುದ್ದಾದ ಮೊಮ್ಮಗಳಿಗೆ ತಿಳಿದಿದೆಯೇ? ನಿಮ್ಮ ಪ್ರೊಫೈಲ್ ಚಿತ್ರವನ್ನು ಬದಲಾಯಿಸಲು ನಾನು ನಿಮಗೆ ಸಲಹೆ ನೀಡುತ್ತೇನೆʼ ಎಂದು ಅವರ ಪ್ರೊಫೈಲ್ ಫೋಟೊವನ್ನು ಹಂಚಿಕೊಂಡಿದ್ದರು. ಪೋಸ್ಟ್‌ನಲ್ಲಿ ಬಾಲಕಿಯ ಪೋಟೊವನ್ನು ಝುಬೈರ್ ಮುಸುಕುಗೊಳಿಸಿದ್ದರು ಎಂದು ಹೇಳಲಾಗಿದೆ.
ಈ ಕುರಿತು ಜಗದೀಶ್ ಸಿಂಗ್ ಎನ್‌ಸಿಪಿಸಿಆರ್‌ಗೆ ದೂರು ನೀಡಿದರು. ಆಯೋಗವು ದಿಲ್ಲಿ ಮತ್ತು ರಾಯ್ಪುರ ಪೊಲೀಸರಿಗೆ ಪತ್ರ ಬರೆದಿದೆ. ನಂತರ ಝುಬೈರ್ ವಿರುದ್ಧ ಎಫ್ಐಆರ್ ದಾಖಲಾಗಿತ್ತು. ಝುಬೈರ್ ಎಫ್ಐಆರ್‌ನ್ನು ಕೋರ್ಟ್‌ನಲ್ಲಿ ಪ್ರಶ್ನಿಸಿದ್ದರು.
ಅಕ್ಟೋಬರ್ 2020ರಲ್ಲಿ ಝುಬೈರ್ ವಿರುದ್ಧ ಯಾವುದೇ ದಬ್ಬಾಳಿಕೆಯ ಕ್ರಮ ತೆಗೆದುಕೊಳ್ಳಬಾರದು ಎಂದು ಹೈಕೋರ್ಟ್ ಆದೇಶಿಸಿತ್ತು. 2024ರಲ್ಲಿ ಜಗದೀಶ್ ಸಿಂಗ್‌ಗೆ ಝುಬೈರ್ ಬಳಿ ಕ್ಷಮೆಯಾಚಿಸುವಂತೆ ಸೂಚಿಸಿತ್ತು.
ಈ ಕುರಿತು ಎಕ್ಸ್‌ನಲ್ಲಿ ಪೋಸ್ಟ್ ಮಾಡಿರುವ ಮುಹಮ್ಮದ್ ಝುಬೈರ್, ಈ ಪ್ರಕರಣದಲ್ಲಿ ಮಕ್ಕಳ ಹಕ್ಕುಗಳ ರಕ್ಷಣೆಗಾಗಿರುವ ರಾಷ್ಟ್ರೀಯ ಆಯೋಗದ (NCPCR) ಮಾಜಿ ಮುಖ್ಯಸ್ಥ ಪ್ರಿಯಾಂಕ್ ಕನೂಂಗೊ ತಮ್ಮ ಅಧಿಕೃತ ಸ್ಥಾನವನ್ನು ದುರುಪಯೋಗಪಡಿಸಿಕೊಂಡರು. ನನ್ನ ಟ್ವೀಟ್ ಅಪ್ರಾಪ್ತ ಬಾಲಕಿಗೆ ಚಿತ್ರಹಿಂಸೆ ಮತ್ತು ಕಿರುಕುಳದಂತಿದೆ ಎಂದು ಆರೋಪಿಸಿ ದಿಲ್ಲಿ ಮತ್ತು ರಾಯ್ಪುರ ಪೊಲೀಸರಿಗೆ ಪತ್ರ ಬರೆದರು. ನನ್ನ ವಿರುದ್ಧ ಅಪಪ್ರಚಾರ ನಡೆಸಿದರು. ಆದರೆ, ಕಳೆದ ವರ್ಷ ದಿಲ್ಲಿ ನ್ಯಾಯಾಲಯ ನನ್ನ ವಿರುದ್ಧ ಪ್ರಕರಣ ದಾಖಲಿಸಿದ ವ್ಯಕ್ತಿಗೆ ಸಾರ್ವಜನಿಕವಾಗಿ ಕ್ಷಮೆಯಾಚಿಸುವಂತೆ ಸೂಚಿಸಿತ್ತು. ಈಗ ಛತ್ತೀಸ್ಗಢ ಪೊಲೀಸರು ಮುಕ್ತಾಯದ ವರದಿಯನ್ನು ಸಲ್ಲಿಸಿದರು. ಇದರಿಂದಾಗಿ ನನ್ನ ವಿರುದ್ಧ ದಾಖಲಾಗಿರುವ 10 ಎಫ್ಐಆರ್‌ಗಳ ಪೈಕಿ ಎರಡು ಎಫ್ಐಆರ್ ರದ್ದಾಗಿದೆ. ಸತ್ಯಕ್ಕೆ ತೊಂದರೆಯಾಗಬಹುದು, ಆದರೆ ಅದನ್ನು ಸೋಲಿಸಲಾಗುವುದಿಲ್ಲ, ನ್ಯಾಯವು ಮೇಲುಗೈ ಸಾಧಿಸುತ್ತದೆ ಎಂದು ಬರೆದರು.