ವಕ್ಫ್ ತಿದ್ದುಪಡಿ ಮಸೂದೆಯನ್ನು ಪ್ರಶ್ನಿಸಿ ಸುಪ್ರೀಂ ಕೋರ್ಟ್ ಮೆಟ್ಟಿಲೇರಿದ ಅಸದುದ್ದೀನ್ ಉವೈಸಿ

ಸುಪ್ರೀಂ ಕೋರ್ಟ್ , ಅಸದುದ್ದೀನ್ ಉವೈಸಿ | PTI
ಹೊಸದಿಲ್ಲಿ: ವಕ್ಫ್ ತಿದ್ದುಪಡಿ ಮಸೂದೆ ವಿರುದ್ಧದ ರಾಜಕೀಯ ಮತ್ತು ಕಾನೂನಾತ್ಮಕ ಹೋರಾಟ ಇದೀಗ ಸುಪ್ರೀಂ ಕೋರ್ಟ್ ಮೆಟ್ಟಿಲೇರಿದ್ದು, ಕಾಂಗ್ರೆಸ್ ಸಂಸದ ಮುಹಮ್ಮದ್ ಜಾವೇದ್ ನಂತರ ಎಐಎಂಐಎಂ ಮುಖ್ಯಸ್ಥ ಅಸದುದ್ದೀನ್ ಉವೈಸಿ ಕೂಡಾ ಮಸೂದೆಯ ಸಾಂವಿಧಾನಿಕ ಮಾನ್ಯತೆಯನ್ನು ಪ್ರಶ್ನಿಸಿದ್ದಾರೆ.
ವಕ್ಫ್ ಮಸೂದೆಯ ಪ್ರಸ್ತಾವಿತ ತಿದ್ದುಪಡಿಗಳಿಂದ ಮುಸ್ಲಿಂ ಸಮುದಾಯದ ಮೂಲಭೂತ ಹಕ್ಕುಗಳ ದಮನವಾಗಲಿದೆ ಹಾಗೂ ಇಸ್ಲಾಮಿಕ್ ಧಾರ್ಮಿಕ ದತ್ತಿಗಳ ಮೇಲೆ ಪ್ರಭುತ್ವದ ತಾರತಮ್ಯ ನಿಯಂತ್ರಣಕ್ಕೆ ದಾರಿ ಮಾಡಿಕೊಡಲಿದೆ ಎಂದು ಇಬ್ಬರೂ ನಾಯಕರು ಆರೋಪಿಸಿದ್ದಾರೆ.
ಲೋಕಸಭೆ ಮತ್ತು ರಾಜ್ಯಸಭೆಗಳೆರಡಲ್ಲೂ ಅಂಗೀಕಾರಗೊಂಡಿರುವ ವಕ್ಫ್ ತಿದ್ದುಪಡಿ ಮಸೂದೆಗೆ ರಾಷ್ಟ್ರಪತಿಗಳು ತಮ್ಮ ಅಂಕಿತ ಹಾಕುವುದಕ್ಕೂ ಮುನ್ನವೇ ವಕೀಲ ಅನಸ್ ತನ್ವೀರ್ ಮೂಲಕ ಈ ಅರ್ಜಿಗಳನ್ನು ಸಲ್ಲಿಸಲಾಗಿದೆ.
ವಕ್ಫ್ ತಿದ್ದುಪಡಿ ಮಸೂದೆಯ ಪರಾಮರ್ಶೆ ನಡೆಸಿದ ಜಂಟಿ ಸದನ ಸಮಿತಿಯ ಸದಸ್ಯರಾಗಿದ್ದ ಜಾವೇದ್, ಮಸೂದೆಗೆ ತರಲಾಗಿರುವ ತಿದ್ದುಪಡಿಗಳಿಂದ ಸಮಾನತೆ, ಧಾರ್ಮಿಕ ಸ್ವಾತಂತ್ರ್ಯ, ಅಲ್ಪಸಂಖ್ಯಾತರ ಹಕ್ಕುಗಳು ಹಾಗೂ ಆಸ್ತಿಗಳಿಗೆ ಸಂಬಂಧಿಸಿದ ಸಂವಿಧಾನದ ವಿಧಿ 14, 25, 26, 29 ಹಾಗೂ 300ಎಯ ಉಲ್ಲಂಘನೆಯಾಗಲಿದೆ ಎಂದು ವಾದಿಸಿದ್ದಾರೆ.
ಕೇಂದ್ರ ವಕ್ಫ್ ಮಂಡಳಿಗೆ ಮುಸ್ಲಿಮೇತರ ಸದಸ್ಯರನ್ನು ನೇಮಕ ಮಾಡುವ ಪ್ರಸ್ತಾವವು ಮತ್ತೊಂದು ವಿವಾದಾತ್ಮಕ ಬದಲಾವಣೆಯಾಗಿದೆ ಎಂದೂ ಅರ್ಜಿಯಲ್ಲಿ ವಾದಿಸಲಾಗಿದೆ. “ಈ ಆಯ್ದ ಹಸ್ತಕ್ಷೇಪವು ಯಾವುದೇ ಸಕಾರಣ ಸಮರ್ಥನೆಯ ಕೊರತೆ ಹೊಂದಿದ್ದು, ನಿರಂಕುಶ ವರ್ಗೀಕರಣವನ್ನು ಸೃಷ್ಟಿಸಿದೆ” ಎಂದು ಅರ್ಜಿಯಲ್ಲಿ ನಮೂದಿಸಲಾಗಿದೆ. ಹಿಂದೂ ಅಥವಾ ಸಿಖ್ ಧಾರ್ಮಿಕ ದತ್ತಿ ಸಂಸ್ಥೆಗಳಲ್ಲಿ ಇಂತಹ ಯಾವುದೇ ಹಸ್ತಕ್ಷೇಪಗಳಿಲ್ಲ ಎಂಬುದರತ್ತಲೂ ಅರ್ಜಿಯಲ್ಲಿ ಬೊಟ್ಟು ಮಾಡಲಾಗಿದೆ.