ಪ್ರಧಾನಿಯೊಂದಿಗೆ ಗಣೇಶ ಪೂಜೆ ವಿವಾದದ ಕುರಿತು ಸಿಜೆಐ ಚಂದ್ರಚೂಡ್ ಪ್ರತಿಕ್ರಿಯಿಸಿದ್ದು ಹೀಗೆ...

Update: 2024-10-28 08:08 GMT

Photo credit: indiatoday.in

ಹೊಸದಿಲ್ಲಿ: ರಾಜಕೀಯ ವ್ಯಕ್ತಿಗಳೊಂದಿಗಿನ ಭೇಟಿಯ ಸಂದರ್ಭದಲ್ಲಿ ನ್ಯಾಯಾಂಗ ವಿಚಾರಗಳನ್ನು ಬದಿಗಿರಿಸುವಷ್ಟು ಪ್ರಬುದ್ಧನಾಗಿದ್ದೇನೆ ಎಂದು ತಮ್ಮ ಸುತ್ತ ಸುತ್ತುಕೊಂಡಿದ್ದ ಪ್ರಧಾನಿಯೊಂದಿಗೆ ಗಣೇಶ ಪೂಜೆಯಲ್ಲಿ ಪಾಲ್ಗೊಂಡ ವಿವಾದದ ಕುರಿತು ಸುಪ್ರೀಂ ಕೋರ್ಟ್ ಮುಖ್ಯ ನ್ಯಾಯಮೂರ್ತಿ ಡಿ.ವೈ.ಚಂದ್ರಚೂಡ್ ಸ್ಪಷ್ಟನೆ ನೀಡಿದ್ದಾರೆ.

ತಮ್ಮ ನಿವಾಸಕ್ಕೆ ಮೋದಿ ಭೇಟಿ ಕುರಿತು ಎದ್ದಿರುವ ವಿವಾದವನ್ನು ಅವರು, ಅನಗತ್ಯ, ಅನಪೇಕ್ಷಿತ ಮತ್ತು ಅತಾರ್ಕಿಕ ಎಂದು ಟೀಕಿಸಿದ್ದಾರೆ.

ʼಲೋಕಸತ್ತಾʼ ಉಪನ್ಯಾಸ ಸರಣಿಯಲ್ಲಿ ಪಾಲ್ಗೊಂಡು ಮಾತನಾಡಿದ ಅವರು, ಇಂತಹ ಭೇಟಿಗಳು ಸಾಮಾನ್ಯವಾಗಿದ್ದು, ಇಂತಹ ಭೇಟಿಗಳ ಸಂದರ್ಭದಲ್ಲಿ ನ್ಯಾಯಾಂಗ ನಿರ್ಣಯಗಳ ಕುರಿತು ಚರ್ಚಿಸುವ ಬದಲು ನ್ಯಾಯಾಂಗಕ್ಕೆ ಸಂಬಂಧಿಸಿದ ಮೂಲಸೌಕರ್ಯ ಸಮಸ್ಯೆಗಳ ಕುರಿತು ಚರ್ಚಿಸಲಾಗುತ್ತದೆ ಎಂದು ಸ್ಪಷ್ಟೀಕರಣ ನೀಡಿದ್ದಾರೆ.

ನ್ಯಾಯಾಂಗ ಮತ್ತು ಕಾರ್ಯಾಂಗದವರು ಪರಸ್ಪರ ಭೇಟಿಯಾದರೆ ಅಲ್ಲೇನೋ ಡೀಲ್ ನಡೆಯುತ್ತಿದೆ ಎಂಬ ಗ್ರಹಿಕೆ ಹುಟ್ಟುತ್ತದೆ. ಆದರೆ ಅದು ನಿಜವಲ್ಲ. ಅದು ಆಡಳಿತಾತ್ಮಕ ಮಾತುಕತೆಯ ಭಾಗವಷ್ಟೇ ಆಗಿರುತ್ತದೆ ಎಂದು ಅವರು ಹೇಳಿದ್ದಾರೆ.

“ಸಾಂವಿಧಾನಿಕ ನ್ಯಾಯಾಲಯಗಳ ನ್ಯಾಯಾಧೀಶರು ಹಾಗೂ ಕಾರ್ಯಾಂಗದ ಮುಖ್ಯಸ್ಥರಲ್ಲಿ ನ್ಯಾಯಾಂಗದ ವಿಚಾರಗಳನ್ನು ನಿರ್ಣಯಗಳಿಂದ ದೃಢವಾಗಿ ಹೊರಗಿಡುವ ಸಾಕಷ್ಟು ಪ್ರಬುದ್ಧತೆ ಇದೆ” ಎಂದು ಹೇಳಿದ್ದಾರೆ.

“ಪ್ರಜಾಸತ್ತಾತ್ಮಕ ಆಡಳಿತ ವ್ಯವಸ್ಥೆಯಲ್ಲಿ ನಮಗೆ ನಮ್ಮಕರ್ತವ್ಯಗಳು ತಿಳಿದಿವೆ ಹಾಗೂ ರಾಜಕೀಯ ಪ್ರತಿನಿಧಿಗಳಿಗೆ ಅವರ ಕರ್ತವ್ಯಗಳು ತಿಳಿದಿವೆ” ಎಂದು ಅವರು ಹೇಳಿದ್ದಾರೆ.

ಸೆಪ್ಟೆಂಬರ್ ತಿಂಗಳಲ್ಲಿ ಸುಪ್ರೀಂ ಕೋರ್ಟ್ ನ್ಯಾಯಮೂರ್ತಿ ಡಿ.ವೈ.ಚಂದ್ರಚೂಡ್ ನಿವಾಸದಲ್ಲಿ ನಡೆದಿದ್ದ ಗಣೇಶ ಪೂಜೆಯಲ್ಲಿ ಪ್ರಧಾನಿ ನರೇಂದ್ರ ಮೋದಿ ಭಾಗವಹಿಸಿದ್ದದ್ದು ವಿವಾದಕ್ಕೆ ಕಾರಣವಾಗಿತ್ತು. ವಿರೋಧ ಪಕ್ಷಗಳು ಈ ಭೇಟಿಯ ಸಮಂಜಸತೆಯನ್ನು ಪ್ರಶ್ನಿಸಿದ್ದವು. ಈ ಹಿನ್ನೆಲೆಯಲ್ಲಿ ಇದೇ ಪ್ರಥಮ ಬಾರಿಗೆ ಅವರು ಮೇಲಿನಂತೆ ಸ್ಪಷ್ಟೀಕರಣ ನೀಡಿದ್ದಾರೆ.

ಮಹಾರಾಷ್ಟ್ರ ಮೂಲದ ಡಿವೈ ಚಂದ್ರಚೂಡ್ ಅವರೊಂದಿಗೆ ಗಣೇಶ್ ಚತುರ್ಥಿ ಸಂದರ್ಭದಲ್ಲಿ ಪ್ರಧಾನಿ ಮೋದಿಯವರು ಮಹಾರಾಷ್ಟ್ರದ ಸಾಂಪ್ರದಾಯಿಕ ಟೋಪಿ ಧರಿಸಿ ಇರುವ ಫೋಟೋ ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆಗಿತ್ತು.

Full View


Tags:    

Writer - ವಾರ್ತಾಭಾರತಿ

contributor

Editor - Irshad Venur

contributor

Byline - ವಾರ್ತಾಭಾರತಿ

contributor

Similar News