ಕಳಪೆ ಎಸಿ ಸಮಸ್ಯೆ ಕುರಿತು ಗಮನ ಸೆಳೆಯಲು ʼಎಮರ್ಜೆನ್ಸಿ ಚೈನ್‌ʼ ಎಳೆದ ಪ್ರಯಾಣಿಕ; RPF ಸಿಬ್ಬಂದಿಯಿಂದ ಹಲ್ಲೆ; ವಿಡಿಯೊ ವೈರಲ್

Update: 2024-10-28 08:55 GMT
PC : @Benarasiyaa

ಪಾಟ್ನಾ: ಪಾಟ್ನಾ-ಕೋಟಾ ಎಕ್ಸ್ ಪ್ರೆಸ್ ರೈಲಿನಲ್ಲಿ ಪ್ರಯಾಣಿಸುತ್ತಿದ್ದ ಪ್ರಯಾಣಿಕರೊಬ್ಬರ ಮೇಲೆ ರೈಲ್ವೆ ರಕ್ಷಣಾ ಪಡೆಯ ಅಧಿಕಾರಿಗಳು ಹಲ್ಲೆ ನಡೆಸಿರುವ ವಿಡಿಯೊ ಸಾಮಾಜಿಕ ಮಾಧ್ಯಮಗಳಲ್ಲಿ ವೈರಲ್ ಆಗಿದೆ. ಅನಂತ್ ಪಾಡೆ ಎಂಬ ಪ್ರಯಾಣಿಕರು ತಾವು ಪ್ರಯಾಣಿಸುತ್ತಿದ್ದ ಹವಾನಿಯಂತ್ರಿತ (AC) ಬೋಗಿಯಲ್ಲಿನ ಕಳಪೆ AC ವ್ಯವಸ್ಥೆ ಬಗ್ಗೆ ಪದೇ ಪದೇ ರೈಲು ಸಿಬ್ಬಂದಿಗಳ ಗಮನಕ್ಕೆ ತಂದರೂ, ಆ ಸಮಸ್ಯೆ ಬಗೆಹರಿಯದೆ ಹೋಗಿದ್ದರಿಂದ ಎಮರ್ಜೆನ್ಸಿ ಚೈನ್ ಎಳೆದಿದ್ದಾರೆ. ಇದರಿಂದ ಕುಪಿತಗೊಂಡಿರುವ ರೈಲ್ವೆ ರಕ್ಷಣಾ ಪಡೆಯ ಅಧಿಕಾರಿಗಳು ಅವರ ಮೇಲೆ ಹಲ್ಲೆ ನಡೆಸಿದ್ದಾರೆ ಎಂದು ವರದಿಯಾಗಿದೆ.

ವರದಿಗಳ ಪ್ರಕಾರ, ಕಳಪೆ ಹವಾನಿಯಂತ್ರಣ ವ್ಯವಸ್ಥೆ ಬಗ್ಗೆ ತಮ್ಮ ಅತೃಪ್ತಿ ವ್ಯಕ್ತಪಡಿಸಲು ಅನಂತ್ ಪಾಂಡೆ ಅಯೋಧ್ಯೆಯ ಬಳಿ ರೈಲನ್ನು ನಿಲ್ಲಿಸಲು ಎಮರ್ಜೆನ್ಸಿ ಚೈನ್ ಎಳೆದಿದ್ದಾರೆ. ಆದರೆ, ಅವರು ಈ ಕೃತ್ಯವನ್ನು ಎರಡಕ್ಕಿಂತ ಹೆಚ್ಚು ಬಾರಿ ಮಾಡಿದ್ದರಿಂದ ಸಹ ಪ್ರಯಾಣಿಕರಲ್ಲಿ ಗಾಬರಿ ಉಂಟಾಗಿದೆ. ರೈಲು ಸುಮಾರು ರಾತ್ರಿ 11.30ರ ವೇಳೆಗೆ ಚಾರ್ಭಾಗ್ ರೈಲ್ವೆ ನಿಲ್ದಾಣಕ್ಕೆ ಆಗಮಿಸಿದಾಗ, ಟಿಕೆಟ್ ತಪಾಸಣಾ ಸಿಬ್ಬಂದಿಯೊಂದಿಗೆ ಬೋಗಿಗೆ ಆಗಮಿಸಿರುವ ಸುಮಾರು 10 ಮಂದಿ ರೈಲ್ವೆ ರಕ್ಷಣಾ ಪಡೆಯ ಅಧಿಕಾರಿಗಳು ಅನಂತ್ ಪಾಂಡೆ ಮೇಲೆ ಹಲ್ಲೆ ನಡೆಸಿ, ಅವರನ್ನು ಬೋಗಿಯಿಂದ ಹೊರದೂಡಿದ್ದಾರೆ. ಈ ಘಟನೆಯ ವಿಡಿಯೊ ಅಕ್ಟೋಬರ್ 28ರಂದು ಸಾಮಾಜಿಕ ಮಾಧ್ಯಮಗಳಲ್ಲಿ ವೈರಲ್ ಆಗಿದೆ.

ಪರಸ್ಪರ ವಾಗ್ವಾದದ ನಂತರ, ಅನಂತ್ ಪಾಡೆಯನ್ನು ರೈಲ್ವೆ ರಕ್ಷಣಾ ಪಡೆಯ ಕಚೇರಿಗೆ ಕರೆದೊಯ್ಯಲಾಗಿದ್ದು, ಅವರ ವಿರುದ್ಧ ರೈಲ್ವೆ ನಿಯಮಗಳ ಉಲ್ಲಂಘನೆ ಪ್ರಕರಣ ದಾಖಲಿಸಲಾಗಿದೆ. ನಂತರ, ಅವರನ್ನು ರೈಲ್ವೆ ನ್ಯಾಯಾಲಯದೆದುರು ಹಾಜರುಪಡಿಸಲಾಗಿದ್ದು, ಅಲ್ಲಿ ಅವರಿಗೆ ಜಾಮೀನು ಮಂಜೂರಾಗಿದೆ.

ಈ ಘಟನೆಯು ರೈಲು ಪ್ರಯಾಣಿಕರ ಹಕ್ಕುಗಳು ಹಾಗೂ ಅವರ ದೂರುಗಳನ್ನು ಪರಿಣಾಮಕಾರಿಯಾಗಿ ಪರಿಹರಿಸಬೇಕಾದ ರೈಲ್ವೆ ಪ್ರಾಧಿಕಾರಗಳ ಹೊಣೆಗಾರಿಕೆಗಳ ಕುರಿತು ಚರ್ಚೆ ಹುಟ್ಟು ಹಾಕಿದೆ.

Tags:    

Writer - ವಾರ್ತಾಭಾರತಿ

contributor

Editor - Ismail

contributor

Byline - ವಾರ್ತಾಭಾರತಿ

contributor

Similar News