ಕೇರಳ: ಯೂಟ್ಯೂಬರ್ ದಂಪತಿ ಮೃತಪಟ್ಟ ಸ್ಥಿತಿಯಲ್ಲಿ ಪತ್ತೆ
ತಿರುವನಂತಪುರಂ: ಯೂಟ್ಯೂಬ್ ನಲ್ಲಿ ನೂರಾರು ಸಂಖ್ಯೆಯ ಹಿಂಬಾಲಕರನ್ನು ಹೊಂದಿದ್ದ ವ್ಲಾಗರ್ ದಂಪತಿ ತಿರುವನಂತಪುರಂ ಜಿಲ್ಲೆಯ ಪರಸ್ಸಾಲದಲ್ಲಿರುವ ತಮ್ಮ ನಿವಾಸದಲ್ಲಿ ಮೃತಪಟ್ಟ ಸ್ಥಿತಿಯಲ್ಲಿ ಪತ್ತೆಯಾಗಿದ್ದಾರೆ ಎಂದು ಸೋಮವಾರ ಪೊಲೀಸರು ತಿಳಿಸಿದ್ದಾರೆ.
ಮೃತರನ್ನು ಚೆರುವಕೋಣಂ ನಿವಾಸಿಗಳಾದ ಗಾರೆ ಮೇಸ್ತ್ರಿ ಸೆಲ್ವರಾಜ್ (45) ಹಾಗೂ ಅವರ ಪತ್ನಿ ಪ್ರಿಯಾ (37) ಎಂದು ಗುರುತಿಸಲಾಗಿದೆ.
ಪೊಲೀಸರ ಪ್ರಕಾರ, ರವಿವಾರ ಎರ್ನಾಕುಲಂ ಜಿಲ್ಲೆಯ ಸಂಸ್ಥೆಯೊಂದರಲ್ಲಿ ತರಬೇತಿನಿರತ ಉದ್ಯೋಗಿಯಾಗಿರುವ ದಂಪತಿಯ ಪುತ್ರ ಅವರಿಬ್ಬರನ್ನು ಮೃತಪಟ್ಟ ಸ್ಥಿತಿಯಲ್ಲಿ ನೋಡಿದ್ದಾನೆ. ಆತ ಮನೆಗೆ ಬಂದಾಗ, ತನ್ನ ತಾಯಿ ಹಾಸಿಗೆಯ ಮೇಲೆ ಬಿದ್ದುಕೊಂಡಿರುವುದು ಹಾಗೂ ಅದೇ ಕೋಣೆಯಲ್ಲಿ ತನ್ನ ತಂದೆ ನೇಣು ಬಿಗಿದುಕೊಂಡಿರುವುದನ್ನು ಕಂಡಿದ್ದಾನೆ ಎಂದು ಹೇಳಿದ್ದಾರೆ.
ಮೊದಲಿಗೆ ಇದೊಂದು ಆತ್ಮಹತ್ಯೆ ಪ್ರಕರಣವಿರಬಹುದೆಂದು ಪೊಲೀಸರು ಶಂಕಿಸಿದ್ದರಾದರೂ, ಮರಣೋತ್ತರ ಪರೀಕ್ಷಾ ವರದಿಯಲ್ಲಿ ಮೃತ ಮಹಿಳೆಯನ್ನು ಉಸಿರುಗಟ್ಟಿಸಿರುವ ಗುರುತುಗಳು ಪತ್ತೆಯಾಗಿವೆ.
ಈ ಕುರಿತು ಪ್ರತಿಕ್ರಿಯಿಸಿರುವ ಪೊಲೀಸ್ ಅಧಿಕಾರಿಯೊಬ್ಬರು, “ಮಹಿಳೆಯ ಹತ್ಯೆಯಾಗಿದೆಯೆ, ಇಲ್ಲವೆ ಎಂಬುದನ್ನು ನಾವೀಗಲೇ ದೃಢಪಡಿಸಲು ಸಾಧ್ಯವಿಲ್ಲ. ಆಕೆಯ ದೇಹದ ಮೇಲೆ ಉಸಿರುಗಟ್ಟಿಸಿರುವ ಗುರುತುಗಳನ್ನು ವೈದ್ಯರು ಪತ್ತೆ ಹಚ್ಚಿದ್ದಾರೆ. ವರದಿಗಳು ಬಂದ ನಂತರವಷ್ಟೇ ಸಾವಿನ ನಿಖರ ಕಾರಣ ತಿಳಿಯಲಿದೆ” ಎಂದು ಹೇಳಿದ್ದಾರೆ.
ಮೊದಲು ಮಹಿಳೆ ಮೃತಪಟ್ಟಿರಬಹುದು ಎಂದು ಪರಿಗಣಿಸಲಾಗಿದೆ ಎಂದೂ ಅವರು ತಿಳಿಸಿದ್ದಾರೆ.
“ರವಿವಾರ ಮೃತ ದಂಪತಿಯ ನಿವಾಸವನ್ನು ನಾವು ತಲುಪಿದಾಗ, ಮಹಿಳೆಯ ದೇಹ ಕೊಳೆತಿರುವ ಚಿಹ್ನೆಗಳು ಕಂಡು ಬಂದವು. ಆದರೆ, ಪುರುಷನ ದೇಹದ ಮೇಲೆ ಅಂತಹ ಯಾವುದೇ ಗುರುತುಗಳು ಕಂಡು ಬರಲಿಲ್ಲ. ತನ್ನ ಪತ್ನಿ ಮೃತಪಟ್ಟ ಕೆಲ ಗಂಟೆಗಳ ನಂತರ ಆಕೆಯ ಪತಿ ಮೃತಪಟ್ಟಿರಬಹುದು ಎಂದು ಶಂಕಿಸಲಾಗಿದೆ” ಎಂದು ಅವರು ಹೇಳಿದ್ದಾರೆ.
ಅವರಿಬ್ಬರೂ ಮೃತಪಡುವುದಕ್ಕೂ ಕೆಲವೇ ಗಂಟೆಗಳ ಮುನ್ನ, ಸುಮಾರು 18,000ದಷ್ಟು ಹಿಂಬಾಲಕರನ್ನು ಹೊಂದಿರುವ ತಮ್ಮ ಯೂಟ್ಯೂಬ್ ವಾಹಿನಿಯಲ್ಲಿ ವಿಡಿಯೊವೊಂದನ್ನು ಪೋಸ್ಟ್ ಮಾಡಿದ್ದರು ಎಂದೂ ವರದಿಯಾಗಿದೆ.