ಬಿಜೆಡಿ ಬೆಂಬಲಿಗರೊಂದಿಗೆ ಘರ್ಷಣೆ : ಓರ್ವ ಬಿಜೆಪಿ ಕಾರ್ಯಕರ್ತನ ಮೃತ್ಯು, ಇತರ ಏಳು ಜನರಿಗೆ ಗಾಯ

Update: 2024-05-16 15:37 GMT

ಸಾಂದರ್ಭಿಕ ಚಿತ್ರ

ಗಂಜಾಂ (ಒಡಿಶಾ): ಗಂಜಾಂ ಜಿಲ್ಲೆಯಲ್ಲಿ ಆಡಳಿತಾರೂಢ ಬಿಜೆಡಿ ಮತ್ತು ಬಿಜೆಪಿ ಬೆಂಬಲಿಗರ ನಡುವಿನ ಘರ್ಷಣೆಯಲ್ಲಿ ಓರ್ವ ಬಿಜೆಪಿ ಕಾರ್ಯಕರ್ತ ಕೊಲ್ಲಲ್ಪಟ್ಟಿದ್ದು, ಇತರ ಏಳು ಜನರು ಗಾಯಗೊಂಡಿದ್ದಾರೆ ಎಂದು ಪೋಲಿಸರು ಗುರುವಾರ ತಿಳಿಸಿದರು.

ಬುಧವಾರ ರಾತ್ರಿ ಅಸ್ಕಾ ಲೋಕಸಭಾ ಕ್ಷೇತ್ರದ ವ್ಯಾಪ್ತಿಯ ಖಲ್ಲಿಕೋಟ್ ಪೋಲಿಸ್ ಠಾಣಾ ವ್ಯಾಪ್ತಿಯ ಶ್ರೀಕೃಷ್ಣ ಸರನಪುರ ಗ್ರಾಮದಲ್ಲಿ ಚುನಾವಣಾ ಪ್ರಚಾರದ ಪೋಸ್ಟರ್ಗಳನ್ನು ಅಳವಡಿಸುವ ವಿಷಯದಲ್ಲಿ ಉಭಯ ಪಕ್ಷಗಳ ಬೆಂಬಲಿಗರ ನಡುವೆ ಘರ್ಷಣೆ ಸಂಭವಿಸಿತ್ತು.

ಮೃತ ಬಿಜೆಪಿ ಕಾರ್ಯಕರ್ತನನ್ನು ದಿಲೀಪ ಕುಮಾರ ಪಹನಾ (28) ಎಂದು ಹೆಸರಿಸಲಾಗಿದೆ. ತೀವ್ರವಾಗಿ ಗಾಯಗೊಂಡಿದ್ದ ಆತ ಆಸ್ಪತ್ರೆಯಲ್ಲಿ ಚಿಕಿತ್ಸೆ ಫಲಕಾರಿಯಾಗದೆ ಮೃತಪಟ್ಟಿದ್ದಾನೆ ಎಂದು ಪೋಲಿಸ್ ಅಧಿಕಾರಿಯೋರ್ವರು ತಿಳಿಸಿದರು.

ಘರ್ಷಣೆ ನಡೆದಾಗ ಉಭಯ ಪಕ್ಷಗಳ ಕಾರ್ಯಕರ್ತರು ಹರಿತವಾದ ಆಯುಧಗಳನ್ನು ಬಳಸಿದ್ದರು. ಗಾಯಾಳುಗಳನ್ನು ಸರಕಾರಿ ಆಸ್ಪತ್ರೆಗೆ ದಾಖಲಾಗಿದ್ದು,ಅವರ ದೇಹಸ್ಥಿತಿ ಸ್ಥಿರವಾಗಿದೆ ಎಂದರು.

ಘಟನೆಯಿಂದ ಕೆರಳಿದ ಬಿಜೆಪಿ ಕಾರ್ಯಕರ್ತರು ಖಲ್ಲಿಕೋಟ್ ವಿಧಾನಸಭಾ ಕ್ಷೇತ್ರದ ಬಿಜೆಡಿ ಅಭ್ಯರ್ಥಿ ಹಾಗೂ ಹಾಲಿ ಶಾಸಕಿ ಸೂರ್ಯಮಣಿ ಬೈದ್ಯ ನಿವಾಸದ ಸಮೀಪ ನಿಲ್ಲಿಸಲಾಗಿದ್ದ ಹಲವಾರು ವಾಹನಗಳಿಗೆ ಹಾನಿಯನ್ನುಂಟು ಮಾಡಿದ್ದಲ್ಲದೆ,ಪೋಲಿಸ್ ಠಾಣೆ ಸಮೀಪದ ರಸ್ತೆ ತಡೆಯನ್ನು ನಡೆಸಿದರು. ಶಾಸಕಿ ಮತ್ತು ಅವರ ಪತಿ ದೈತಾರಿ ಬೆಹೆರಾ ಬಂಧನಕ್ಕೆ ಅವರು ಆಗ್ರಹಿಸಿದರು.

ಘಟನೆಯ ಕುರಿತು ಕಳವಳ ವ್ಯಕ್ತಪಡಿಸಿರುವ ರಾಜ್ಯ ಮುಖ್ಯ ಚುನಾವಣಾಧಿಕಾರಿ ನಿಕುಂಜ ಬಿಹಾರಿಯವರು,ಶಾಂತಿಯನ್ನು ತಕ್ಷಣ ಮರುಸ್ಥಾಪಿಸುವಂತೆ ಮತ್ತು ಚುನಾವಣಾ ಹಿಂಸಾಚಾರವನ್ನು ತಡೆಯಲು ಎಲ್ಲ ಕ್ರಮಗಳನ್ನು ಕೈಗೊಳ್ಳುವಂತೆ ಜಿಲ್ಲಾಧಿಕಾರಿ ಮತ್ತು ಜಿಲ್ಲಾ ಪೋಲಿಸ್ ಅಧೀಕ್ಷಕರಿಗೆ ಸೂಚಿಸಿದ್ದಾರೆ.

ಪರಿಸ್ಥಿತಿಯ ನಿಯಂತ್ರಣಕ್ಕಾಗಿ ಗ್ರಾಮದಲ್ಲಿ ವ್ಯಾಪಕ ಪೋಲಿಸ್ ಬಂದೋಬಸ್ತ್ ಏರ್ಪಡಿಸಲಾಗಿದೆ.

ಖಲ್ಲಿಕೋಟ್ (ಎಸ್ಸಿ) ವಿಧಾನಸಭಾ ಕ್ಷೇತ್ರದಲ್ಲಿ ಮೇ 20ರಂದು ಏಕಕಾಲಿಕ ಲೋಕಸಭಾ ಮತ್ತು ವಿಧಾನಸಭಾ ಚುನಾವಣೆಗಳು ನಡೆಯಲಿವೆ.

Tags:    

Writer - ವಾರ್ತಾಭಾರತಿ

contributor

Editor - Ismail

contributor

Byline - ವಾರ್ತಾಭಾರತಿ

contributor

Similar News