ಉತ್ತರಪ್ರದೇಶ: ಸ್ಯಾನಿಟರಿ ಪ್ಯಾಡ್ ಕೇಳಿದ್ದಕ್ಕೆ ವಿದ್ಯಾರ್ಥಿನಿಯನ್ನು ಪರೀಕ್ಷಾ ಕೊಠಡಿಯಿಂದ ಹೊರ ಕಳುಹಿಸಿ ಅವಮಾನ!

Update: 2025-01-27 11:16 IST
Photo of classroom

ಸಾಂದರ್ಭಿಕ ಚಿತ್ರ (Meta AI)

  • whatsapp icon

ಲಕ್ನೋ : ಪರೀಕ್ಷೆಯ ಸಮಯದಲ್ಲಿ ಋತುಚಕ್ರವಾದ ವಿದ್ಯಾರ್ಥಿನಿ ಸ್ಯಾನಿಟರಿ ಪ್ಯಾಡ್ ಕೇಳಿದ್ದಕ್ಕೆ ನೀಡದೇ, ತರಗತಿಯಿಂದ ಹೊರ ಕಳುಹಿಸಿ, ಪ್ರಾಂಶುಪಾಲರ ಕಚೇರಿಯ ಹೊರಗೆ ಒಂದು ಗಂಟೆ ನಿಲ್ಲುವಂತೆ ಮಾಡಿ ಮನೆಗೆ ಕಳುಹಿಸಿದ ಆಘಾತಕಾರಿ ಘಟನೆ ಉತ್ತರ ಪ್ರದೇಶದಲ್ಲಿ ಶನಿವಾರ ನಡೆದಿದೆ.

ಉತ್ತರಪ್ರದೇಶದ ಬರೇಲಿ ಪಟ್ಟಣದ ಖಾಸಗಿ ಕಾಲೇಜಿನಲ್ಲಿ ಓದುತ್ತಿದ್ದ 11 ನೇ ತರಗತಿಯ ವಿದ್ಯಾರ್ಥಿನಿ ರಕ್ತಸ್ರಾವ ಮುಂದುವರಿದಿದ್ದರೂ ಮುಖ್ಯೋಪಾಧ್ಯಾಯಿನಿಯ ಕಚೇರಿಯ ಹೊರಗೆ ನಿಂತಿದ್ದರಿಂದ ಅವಮಾನಕ್ಕೊಳಗಾಗಿದ್ದಾಳೆ. ಕೊನೆಗೆ ವಿದ್ಯಾರ್ಥಿನಿಯು ಅದೇ ಬಟ್ಟೆಯಲ್ಲಿ ಮನೆಗೆ ಹೋಗಬೇಕಾದ ಪ್ರಸಂಗ ಎದುರಾಗಿದೆ.

ಘಟನೆಯ ಕುರಿತು ವಿದ್ಯಾರ್ಥಿನಿಯ ಪೋಷಕರು ಕಾಲೇಜು ಆಡಳಿತ ಮಂಡಳಿಯ ವಿರುದ್ಧ ಜಿಲ್ಲಾ ಶಿಕ್ಷಣ ಅಧಿಕಾರಿಗಳಿಗೆ ದೂರು ನೀಡಿದ್ದಾರೆ ಎಂದು ತಿಳಿದು ಬಂದಿದೆ.

ಘಟನೆಯ ಸಂಬಂಧ ವಿದ್ಯಾರ್ಥಿನಿಯ ಪೋಷಕರಿಂದ ದೂರು ಬಂದಿದ್ದು, ಈ ವಿಷಯವನ್ನು ತನಿಖೆ ಮಾಡಲಾಗುತ್ತಿದೆ ಎಂದು ಹಿರಿಯ ಜಿಲ್ಲಾ ಶಿಕ್ಷಣ ಅಧಿಕಾರಿಯೊಬ್ಬರು ಬರೇಲಿಯಲ್ಲಿ ತಿಳಿಸಿದ್ದಾರೆ. "ಆರೋಪ ನಿಜವೆಂದು ಕಂಡುಬಂದರೆ ನಾವು ಕಾಲೇಜು ಆಡಳಿತ ಮಂಡಳಿಯ ವಿರುದ್ಧ ಕ್ರಮ ಕೈಗೊಳ್ಳುತ್ತೇವೆ" ಎಂದು ಅವರು ಹೇಳಿದರು.

‘‘ಈ ಘಟನೆಯಿಂದ ನಮ್ಮ ಮಗಳು ಮಾನಸಿಕವಾಗಿ ನೊಂದಿದ್ದಾಳೆ. ತಪ್ಪಿತಸ್ಥ ಶಿಕ್ಷಕರಿಗೆ ಶಿಕ್ಷೆಯಾಗಬೇಕು,’’ ಎಂದು ವಿದ್ಯಾರ್ಥಿನಿಯ ತಾಯಿ ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಈ ಕುರಿತು ಪ್ರತಿಕ್ರಿಯಿಸಿದ, ಕಾಲೇಜಿನ ಪ್ರಾಂಶುಪಾಲೆ ರಚನಾ ಅರೋರಾ ಅವರು, ವಿದ್ಯಾರ್ಥಿನಿ ಮಾಹಿತಿ ಪಡೆಯುವಾಗಲೇ ಮನೆಗೆ ತೆರಳಿದ್ದರು ಎಂದು ಹೇಳಿದರು. "ನಮ್ಮದು ಬಾಲಕಿಯರ ಕಾಲೇಜು. ಪ್ರತಿಯೊಬ್ಬ ಶಿಕ್ಷಕರ ಬಳಿಯೂ ಸ್ಯಾನಿಟರಿ ಪ್ಯಾಡ್‌ಗಳಿರುತ್ತವೆ. ವಿದ್ಯಾರ್ಥಿನಿಗೆ ತುರ್ತು ಸಂದರ್ಭದಲ್ಲಿ ಏಕೆ ನೀಡಲಿಲ್ಲ ಎಂಬುದರ ಕುರಿತು ನಾವು ತನಿಖೆ ಮಾಡುತ್ತಿದ್ದೇವೆ" ಎಂದು ಅವರು ಪ್ರತಿಕ್ರಿಯೆ ನೀಡಿದ್ದಾರೆ.

Tags:    

Writer - ವಾರ್ತಾಭಾರತಿ

contributor

Editor - Irshad Venur

contributor

Byline - ವಾರ್ತಾಭಾರತಿ

contributor

Similar News