ಜೂನ್ 15ರೊಳಗೆ ಕಚೇರಿಗಳನ್ನು ತೆರವುಗೊಳಿಸಿ : ನ್ಯಾಯಾಲಯಕ್ಕೆ ಮೀಸಲಾದ ಜಮೀನಿನ ಕುರಿತು ಆಪ್ ಪಕ್ಷಕ್ಕೆ ಸುಪ್ರೀಂ ಕೋರ್ಟ್ ಸೂಚನೆ
ಹೊಸದಿಲ್ಲಿ: ರಾಷ್ಟ್ರ ರಾಜಧಾನಿ ದಿಲ್ಲಿಯ ರೌಸ್ ಅವೆನ್ಯೂನಲ್ಲಿರುವ ಜಮೀನು ನ್ಯಾಯಾಂಗ ಮೂಲಸೌಕರ್ಯದ ವಿಸ್ತರಣೆಗಾಗಿ ದಿಲ್ಲಿ ಹೈಕೋರ್ಟ್ ಗೆ ಮಂಜೂರು ಮಾಡಲಾಗಿದೆ ಎಂಬುದನ್ನು ಗಮನಕ್ಕೆ ತೆಗೆದುಕೊಂಡ ಸುಪ್ರೀಂ ಕೋರ್ಟ್, ಅರವಿಂದ್ ಕೇಜ್ರಿವಾಲ್ ನೇತೃತ್ವದ ಆಮ್ ಆದ್ಮಿ ಪಕ್ಷಕ್ಕೆ ಅಲ್ಲಿರುವ ತನ್ನ ಕಚೇರಿಗಳನ್ನು ತೆರವುಗೊಳಿಸುವಂತೆ ಸೋಮವಾರ ಸೂಚಿಸಿದೆ.
ಜಾಗವನ್ನು ತೆರವುಗೊಳಿಸಲು ಆಮ್ ಆದ್ಮಿ ಪಕ್ಷಕ್ಕೆ ಜೂನ್ 15, 2014ರವರೆಗೆ ಸುಪ್ರೀಂ ಕೋರ್ಟ್ ಸಮಯಾವಕಾಶ ನೀಡಿದೆ.
ತನ್ನ ಕಚೇರಿಗಳಿಗಾಗಿ ಸೂಕ್ತ ಜಾಗಕ್ಕಾಗಿ ಜಮೀನು ಮತ್ತು ಅಭಿವೃದ್ಧಿ ಕಚೇರಿಯನ್ನು ಸಂಪರ್ಕಿಸುವಂತೆ ಮುಖ್ಯ ನ್ಯಾಯಮೂರ್ತಿ ಡಿ.ವೈ.ಚಂದ್ರಚೂಡ್ ಹಾಗೂ ನ್ಯಾ. ಜೆ.ಬಿ. ಪರ್ದಿವಾಲಾ ಮತ್ತು ಮನೋಜ್ ಮಿಶ್ರಾ ಅವರನ್ನೊಳಗೊಂಡ ನ್ಯಾಯಪೀಠವು ಆಮ್ ಆದ್ಮಿ ಪಕ್ಷಕ್ಕೆ ನಿರ್ದೇಶನ ನೀಡಿದೆ.
ಲೋಕಸಭಾ ಚುನಾವಣೆಗಳು ಬರುತ್ತಿರುವುದರಿಂದ ಜಾಗವನ್ನು ತೆರವುಗೊಳಿಸಲು ಜೂನ್ 15ರವರೆಗೆ ನ್ಯಾಯಾಲಯವು ಆಮ್ ಆದ್ಮಿ ಪಕ್ಷಕ್ಕೆ ಸಮಯಾವಕಾಶ ಮಂಜೂರು ಮಾಡಿದೆ.