ಕೇರಳ | ಮರವನ್ನು ತಳ್ಳಿ ಹಾಕಿದ ಕಾಡಾನೆ; ಬೈಕ್ ನಲ್ಲಿ ತೆರಳುತ್ತಿದ್ದ ಇಂಜಿನಿಯರಿಂಗ್ ವಿದ್ಯಾರ್ಥಿನಿ ಮೃತ್ಯು
ಕೊಚ್ಚಿ: ಕೇರಳದ ಕೋತಮಂಗಲಂ ಬಳಿ ಬೈಕ್ ನಲ್ಲಿ ತೆರಳುವಾಗ ಕಾಡಾನೆಯೊಂದು ತಳ್ಳಿ ಹಾಕಿದ ತಾಳೆ ಮರ ಮೈಮೇಲೆ ಬಿದ್ದು ಇಂಜಿನಿಯರಿಂಗ್ ವಿದ್ಯಾರ್ಥಿನಿಯೊಬ್ಬರು ಮೃತಪಟ್ಟಿದ್ದು, ಯುವಕನೋರ್ವ ಗಾಯಗೊಂಡಿದ್ದಾರೆ.
ತ್ರಿಶೂರ್ ಮೂಲದ ಆನ್ ಮೇರಿ ಸಿ ವಿ(21) ಮೃತ ವಿದ್ಯಾರ್ಥಿನಿ. ಘಟನೆಯಲ್ಲಿ ಆನ್ ಮೇರಿ ಸಹಪಾಠಿ ಅಲ್ತಾಫ್ ಅಬೂಬಕರ್ (21) ಗಾಯಗೊಂಡಿದ್ದಾರೆ. ಕೋತಮಂಗಲಂನ ಕಾಲೇಜೊಂದರಲ್ಲಿ ಮೂರನೇ ವರ್ಷದ ಎಲೆಕ್ಟ್ರಿಕಲ್ ಇಂಜಿನಿಯರಿಂಗ್ ವಿದ್ಯಾರ್ಥಿನಿಯಾಗಿರುವ ಆನ್ ಮೇರಿ ತನ್ನ ಸಹಪಾಠಿ ಅಲ್ತಾಫ್ ಅಬೂಬಕರ್ ಅವರೊಂದಿಗೆ ಶನಿವಾರ ಸಂಜೆ 6 ಗಂಟೆ ಸುಮಾರಿಗೆ ಬೈಕ್ ನಲ್ಲಿ ತೆರಳುತ್ತಿದ್ದರು. ಈ ವೇಳೆ ನಗರಂಪಾರಾ ಅರಣ್ಯ ಕಚೇರಿ ಬಳಿ ಚೆಂಬಂಕುಝಿ ಎಂಬಲ್ಲಿ ಕಾಡಾನೆ ತಾಳೆ ಮರವನ್ನು ಬೇರು ಸಮೇತ ಕಿತ್ತು ಹಾಕಿದ್ದು, ಈ ವೇಳೆ ಬೈಕ್ ಮೇಲೆ ಮರ ಬಿದ್ದಿದೆ.
ಕಾಡಾನೆ ತಾಳೆ ಮರವನ್ನು ಬುಡಸಮೇತ ಕಿತ್ತೆಸೆದ ಪರಿಣಾಮ ಕೊಂಬೆ ನೇರವಾಗಿ ಆನ್ ಮೇರಿ ಮೇಲೆ ಬಿದ್ದಿದ್ದು, ಅಲ್ತಾಫ್ ಬೈಕ್ನಿಂದ ಕೆಳಗೆ ಬಿದ್ದಿದ್ದಾನೆ. ಬೈಕ್ 25 ಮೀಟರ್ ದೂರ ಸಾಗಿ ಹಳ್ಳಕ್ಕೆ ಬಿದ್ದಿದೆ. ತಕ್ಷಣ ಇಬ್ಬರು ವಿದ್ಯಾರ್ಥಿಗಳನ್ನು ಆಸ್ಪತ್ರೆಗೆ ಸಾಗಿಸಲಾಯಿತಾದರೂ ಆನ್ ಮೇರಿ ಚಿಕಿತ್ಸೆ ಫಲಿಸದೆ ಮೃತಪಟ್ಟಿದ್ದಾರೆ.
ಜನ ಸಂದಣಿ ಪ್ರದೇಶದಲ್ಲಿ ಈ ಘಟನೆ ನಡೆದಿದೆ. ಅರಣ್ಯ ಇಲಾಖೆಯ ನಿರ್ಲಕ್ಷ್ಯದಿಂದ ಘಟನೆ ನಡೆದಿದೆ ಎಂದು ಸ್ಥಳೀಯರು ಆಕ್ರೋಶವನ್ನು ವ್ಯಕ್ತಪಡಿಸಿದ್ದು, ಅರಣ್ಯ ಇಲಾಖೆ ಕಚೇರಿಗೆ ಜಾಥಾವನ್ನು ನಡೆಸಿದ್ದಾರೆ.