ರಾಜ್ಯ ಹೈಕೋರ್ಟ್ ನ್ಯಾಯಾಧೀಶರಾಗಿ ಕೆ.ವಿ.ಅರವಿಂದ್ ನೇಮಕಕ್ಕೆ ಕೊಲಿಜಿಯಂ ಶಿಫಾರಸು
ಹೊಸದಿಲ್ಲಿ: ನ್ಯಾಯವಾದಿ ಕುರುಬರಹಳ್ಳಿ ವೆಂಕಟರಾಮರೆಡ್ಡಿ ಅರವಿಂದ್ ಅವರನ್ನು ಕರ್ನಾಟಕ ಹೈಕೋರ್ಟ್ ನ ನ್ಯಾಯಾಧೀಶರಾಗಿ ನೇಮಿಸಲು ಭಾರತದ ಮುಖ್ಯನ್ಯಾಯಮೂರ್ತಿ ಡಿ.ವೈ.ಚಂದ್ರಚೂಡ್ ನೇತೃತ್ವದ ಸುಪ್ರೀಂಕೋರ್ಟ್ ಕೊಲಿಜಿಯಂ ಶಿಫಾರಸು ಮಾಡಿದೆ.
ಕೆ.ವಿ. ಅರವಿಂದ್ ಅವರನ್ನು ನ್ಯಾಯಾಧೀಶರಾಗಿ ನೇಮಿಸಲು ಕರ್ನಾಟಕ ಹೈಕೋರ್ಟ್ 2022ರ ಆಗಸ್ಟ್ 16ರಂದು ಕೊಲಿಜಿಯಂಗೆ ಶಿಫಾರಸು ಮಾಡಿತ್ತು. ಮುಖ್ಯಮಂತ್ರಿ ಹಾಗೂ ರಾಜ್ಯಪಾಲರು ಕೂಡಾ ಹೈಕೋರ್ಟ್ ನ ಶಿಫಾರಸಿಗೆ ಸಮ್ಮತಿಯನ್ನು ಸೂಚಿಸಿದ್ದರು ಎಂದು ಕೊಲಿಜಿಯಂ ಹೇಳಿಕೆಯೊಂದರಲ್ಲಿ ತಿಳಿಸಿದೆ.
ನ್ಯಾಯವಾದಿಯಾಗಿ ಕೆ.ವಿ. ಅರವಿಂದ್ ಅವರು ಸುಮಾರು 23 ವರ್ಷಗಳಿಂದ ಸೇವೆ ಸಲ್ಲಿಸಿದ್ದಾರೆ. ರಾಜ್ಯ ಸರಕಾರದ ವಿವಿಧ ಇಲಾಖೆಗಳ ಸ್ಥಾಯಿ ವಕೀಲರಾಗಿ ಅವರು ಹೈಕೋರ್ಟ್ ನಲ್ಲಿ ಹಲವಾರು ಸಲ ವಾದಿಸಿದ್ದರು. 567 ತೀರ್ಪುಗಳು ಹೊರಬಿದ್ದಿರುವ ಪ್ರಕರಣಗಳಲ್ಲಿ ಅವರು ನ್ಯಾಯವಾದಿಯಾಗಿ ವಾದಿಸಿದ್ದರು.
‘‘ತೆರಿಗೆಗೆ ಸಂಬಂಧಿಸಿದ ದಾವೆಗಳು ಗಣನೀಯ ಪ್ರಮಾಣದಲ್ಲಿ ಕರ್ನಾಟಕ ಹೈಕೋರ್ಟ್ ನ ಮುಂದಿವೆ. ತೆರಿಗೆ ಸಂಬಂಧಿಸಿದ ಕಾನೂನು ವಿಭಾಗದಲ್ಲಿ ಗಾಢವಾದ ಅನುಭವವಿರುವಂತಹ ನುರಿತ ನ್ಯಾಯಾಧೀಶರ ಅಗತ್ಯವಿದೆ’’ ಎಂದು ಕೆ.ವಿ. ಅರವಿಂದ್ ಅವರನ್ನು ಹೈಕೋರ್ಟ್ ನ್ಯಾಯಾಧೀಶರಾಗಿ ನೇಮಿಸಲು ಶಿಫಾರಸು ಮಾಡಿ ಕೊಲಿಜಿಯಂ ನೀಡಿದ ಹೇಳಿಕೆಯಲ್ಲಿ ತಿಳಿಸಿದೆ.