ತನ್ನ ಬಳಿ ಬಂದು ನಿಂತುಕೊಳ್ಳುವಂತೆ ಒತ್ತಾಯಿಸಿ ವರದಿಗಾರ್ತಿಗೆ ಅವಮಾನಿಸಿದ ಅಣ್ಣಾಮಲೈ: ಪತ್ರಕರ್ತರಿಂದ ಆಕ್ಷೇಪ
ಚೆನ್ನೈ: ತಮಿಳುನಾಡು ಬಿಜೆಪಿ ಅಧ್ಯಕ್ಷ ಕೆ.ಅಣ್ಣಾಮಲೈ ಅವರು ತಮಗೆ ಪ್ರಶ್ನೆ ಕೇಳಿದ ಮಹಿಳಾ ವರದಿಗಾರ್ತಿಯೊಂದಿಗೆ ತೋರಿದ ವರ್ತನೆ ವಿವಾದವನ್ನು ಹುಟ್ಟುಹಾಕಿದೆ, ಅಲ್ಲದೆ ಪತ್ರಕರ್ತರಿಂದಲೂ ತೀವ್ರ ಟೀಕೆಗೆ ವ್ಯಕ್ತವಾಗಿದೆ.
ನೀವು ಬಿಜೆಪಿ ರಾಜ್ಯ ಘಟಕದ ಅಧ್ಯಕ್ಷರಾಗಿಲ್ಲದಿದ್ದರೆ ನೀವು ಬಿಜೆಪಿಯಲ್ಲೇ ಇರುತ್ತೀರಾ ಎಂದು ಪತ್ರಕರ್ತೆಯೊಬ್ಬರು ಅಣ್ಣಾಮಲೈ ಬಳಿ ಕೇಳಿದ್ದಾರೆ.
ಇದಕ್ಕೆ ಪ್ರತಿಕ್ರಿಯಿಸಿದ ಅಣ್ಣಾಮಲೈ, ಈ ಪ್ರಶ್ನೆ ಕೇಳಿದ ವರದಿಗಾರ್ತಿ ತನ್ನ ಬಳಿ ಬಂದು ನಿಂತುಕೊಳ್ಳುವಂತೆ ಕರೆದಿದ್ದಾರೆ. ಟಿವಿ ಮೂಲಕ ತಮಿಳುನಾಡಿನ ಎಂಟು ಕೋಟಿ ಜನತೆಯೂ ಇಂತಹ ಪ್ರಶ್ನೆ ಕೇಳುವುದು ಯಾರು ಎನ್ನುವುದು ನೋಡಲಿ, ನೀವು ಬಂದು ನನ್ನ ಪಕ್ಕದಲ್ಲಿ ನಿಂತುಕೊಳ್ಳಿ ಎಂದು ವರದಿಗಾರ್ತಿಗೆ ಅವಮಾನವಾಗುವಂತೆ ಉತ್ತರಿಸಿದ್ದಾರೆ.
"ಬನ್ನಿ ನನ್ನ ಪಕ್ಕದಲ್ಲಿ ನಿಲ್ಲಿ. ನನಗೆ ಇಂತಹ ಪ್ರಶ್ನೆಯನ್ನು ಯಾರು ಕೇಳಿದ್ದಾರೆ ಎಂದು ಜನರು ಟಿವಿ ಮೂಲಕ ನೋಡಲಿ. ಪ್ರಶ್ನೆಗಳನ್ನು ಕೇಳಲು ಒಂದು ಮಾರ್ಗವಿದೆ. ಅಂತಹ ಅದ್ಭುತ ಪ್ರಶ್ನೆಯನ್ನು ಕೇಳಿದ ವ್ಯಕ್ತಿಯನ್ನು ಎಂಟು ಕೋಟಿ ಜನರಿಗೆ ತಿಳಿದಿರಬೇಕು" ಎಂದು ಅಣ್ಣಾಮಲೈ ಹೇಳಿದ್ದಾರೆ.
ಅಣ್ಣಾಮಲೈ ಪದೇ ಪದೇ ಮಹಿಳಾ ವರದಿಗಾರ್ತಿಗೆ ಕ್ಯಾಮೆರಾಗಳ ಮುಂದೆ ನಿಲ್ಲುವಂತೆ ಕೇಳಿದ್ದಾರೆ. ಅದಕ್ಕೆ, ಸಹ ಪತ್ರಕರ್ತರು ಆಕ್ಷೇಪಿಸಿದ್ದಾರೆ.
"ನಾನು ಪೂರ್ಣಾವಧಿ ರಾಜಕಾರಣಿ ಅಲ್ಲ, ರೈತನಾಗಿರುವುದು ನನ್ನ ಗುರುತು" ಎಂದು ಅಣ್ಣಾಮಲೈ ಹೇಳಿದರು.
“ವರದಿಗಾರರಿರು ಸರಿಯಾದ ರೀತಿಯಲ್ಲಿ ಪ್ರಶ್ನೆಗಳನ್ನು ಕೇಳಲು ಮಾತ್ರ ಸಲಹೆ ನೀಡುತ್ತಿದ್ದೇನೆ. ಒಳ್ಳೆಯ ಉದ್ದೇಶದಿಂದ ನಾನು ನಿಮಗೆ ಸಲಹೆ ನೀಡುತ್ತಿದ್ದೇನೆ ಸಹೋದರಿ" ಎಂದು ಅಣ್ಣಾಮಲೈ ತಮ್ಮ ಕ್ರಮವನ್ನು ಸಮರ್ಥಿಸಿದರು.
ಅಣ್ಣಾಮಲೈ ಅವರ ಕ್ರಮವನ್ನು ಕೊಯಮತ್ತೂರು ಪ್ರೆಸ್ ಕ್ಲಬ್ ತೀವ್ರವಾಗಿ ಖಂಡಿಸಿದೆ.
ಪತ್ರಿಕೋದ್ಯಮ ನೀತಿಯನ್ನು ಸಾರುವ ಮೊದಲು ಅಣ್ಣಾಮಲೈ ಅವರು ನಾಯಕರಾಗುವ ನೀತಿಯನ್ನು ಕಲಿತು ಗೌರವಯುತವಾಗಿ ನಡೆದುಕೊಳ್ಳಬೇಕು. ಪತ್ರಿಕೋದ್ಯಮವು ನಾಗರಿಕರು ಮತ್ತು ಸಾರ್ವಜನಿಕ ಜೀವನದಲ್ಲಿ ಇರುವವರ ನಡುವೆ ಸೇತುವೆಯಾಗಿ ನಿಂತಿದೆ ಎಂದು ಕೊಯಮತ್ತೂರು ಪ್ರೆಸ್ ಕ್ಲಬ್ ಅಧ್ಯಕ್ಷ ಎ.ಆರ್.ಬಾಬು ಹೇಳಿದರು.