ಬಿಜೆಪಿ ಶಾಸಕ ರಾಜಾ ಸಿಂಗ್‌ರಿಂದ ಬೆದರಿಕೆ: ಕಾಮಿಡಿಯನ್ ಡೇನಿಯಲ್ ಫರ್ನಾಂಡೀಸ್‌ ಶೋ ರದ್ದು

Update: 2024-06-30 07:59 GMT

ಕಾಮಿಡಿಯನ್ ಡೇನಿಯಲ್ ಫರ್ನಾಂಡೀಸ್ (Photo: thenewsminute.com)

ಹೈದರಾಬಾದ್: ಜೈನರಿಗೆ ಅವಹೇಳನ ಮಾಡಿದ್ದಾರೆಂದು ಆರೋಪಿಸಿ ಬಿಜೆಪಿಯ ಶಾಸಕ ರಾಜಾ ಸಿಂಗ್ ಬೆದರಿಕೆ ಒಡ್ಡಿದ್ದರಿಂದ ಶನಿವಾರ ನಡೆಯಬೇಕಿದ್ದ ಕಾಮಿಡಿಯನ್ ಡೇನಿಯಲ್ ಫರ್ನಾಂಡೀಸ್ ಅವರ ಹೈದರಾಬಾದ್ ಶೋ ರದ್ದಾಗಿದೆ ಎಂದು ವರದಿಯಾಗಿದೆ.

ಬಿಜೆಪಿಯ ಟೀಕಾಕಾರರಾಗಿರುವ ಡೇನಿಯಲ್ ಫರ್ನಾಂಡೀಸ್, ಶನಿವಾರ ಸಂಜೆ 4 ಗಂಟೆಗೆ ಜ್ಯುಬಿಲಿ ಹಿಲ್ಸ್‌ನ ಹಾರ್ಟ್ ಕಪ್ ಕಾಫಿಯನ್ನು ತಮ್ಮ ಕಾಮಿಡಿ ಶೋ ಪ್ರದರ್ಶಿಸಬೇಕಿತ್ತು. ಇತ್ತೀಚೆಗೆ ಮುಸ್ಲಿಂ ವೇಷ ಹಾಕಿ ಬಕ್ರೀದ್ ಹಬ್ಬದಲ್ಲಿ ಮೇಕೆಗಳನ್ನು ʼರಕ್ಷಿಸಿದ್ದʼ ಜೈನರನ್ನು ಉಲ್ಲೇಖಿಸಿದ ಅವರ ಕಾಮಿಡಿ ಶೋ ತೀವ್ರ ವಿವಾದಕ್ಕೆ ಗುರಿಯಾಗಿತ್ತು.

ಕಾಮಿಡಿಯನ್ ಡೇನಿಯಲ್ ಅವರಿಗೆ ಬೆದರಿಕೆ ಒಡ್ಡಿರುವ ಗೋಶಾಮಹಲ್ ಶಾಸಕ ರಾಜಾ ಸಿಂಗ್, "ನಿಮ್ಮ ಶೋ ಅನ್ನು ರದ್ದುಗೊಳಿಸಿ. ಇಲ್ಲವಾದರೆ ನೀವು ಹೈದರಾಬಾದ್ ಅಥವಾ ತೆಲಂಗಾಣಕ್ಕೆ ಭೇಟಿ ನೀಡಲು ನೂರು ಬಾರಿ ಯೋಚಿಸುವಂತೆ ನಮ್ಮ ಕಾರ್ಯಕರ್ತರು ನಿಮ್ಮನ್ನು ಥಳಿಸಲಿದ್ದಾರೆ" ಎಂದು ಎಚ್ಚರಿಸಿದ್ದರು.

ಈ ವಿಷಯದಲ್ಲಿ ಮಧ್ಯಪ್ರವೇಶಿಸಿ, ಶೋ ಅನ್ನು ರದ್ದುಗೊಳಿಸಬೇಕು ಎಂದು ಹೈದರಾಬಾದ್ ಪೊಲೀಸ್ ಆಯುಕ್ತರನ್ನು ಆಗ್ರಹಿಸಿದ್ದ ರಾಜಾ ಸಿಂಗ್, ಒಂದು ವೇಳೆ ಮಧ್ಯಪ್ರದೇಶ ಮಾಡದಿದ್ದರೆ, ಜೈನ ಅಥವಾ ಹಿಂದೂ ಸಮುದಾಯವನ್ನು ಅವಹೇಳನ ಮಾಡುವ ಕಾಮೆಡಿಯನ್‌ಗಳು, ಆ ಬಗ್ಗೆ ನೂರು ಬಾರಿ ಯೋಚಿಸುವಂತೆ ಡೇನಿಯಲ್ ಫರ್ನಾಂಡೀಸ್ ವಿಚಾರದಲ್ಲಿ ಮಾಡಲಾಗುವುದು ಎಂದು ಎಚ್ಚರಿಕೆ ರವಾನಿಸಿದ್ದರು.

ಶೋ ರದ್ದಾಗಿರುವುದನ್ನು ಖಾತರಿ ಪಡಿಸಿರುವ ಜ್ಯುಬಿಲಿ ಹಿಲ್ಸ್ ಪೊಲೀಸ್ ಠಾಣೆಯ ಠಾಣಾಧಿಕಾರಿ ವೆಂಕಟೇಶ್ವರ ರೆಡ್ಡಿ, ಸಂಘಟಕರು ಸ್ವಯಂಪ್ರೇರಿತವಾಗಿ ಶೋ ಅನ್ನು ರದ್ದುಗೊಳಿಸಿದ್ದಾರೆ. ಅವರು ಶೋಗೆ ಭದ್ರತೆ ನೀಡುವಂತೆ ನಮ್ಮನ್ನು ಸಂಪರ್ಕಿಸಿಲ್ಲ ಎಂದು ಸ್ಪಷ್ಟಪಡಿಸಿದ್ದಾರೆ.

Tags:    

Writer - ವಾರ್ತಾಭಾರತಿ

contributor

Editor - Irshad Venur

contributor

Byline - ವಾರ್ತಾಭಾರತಿ

contributor

Similar News