ಭಾರತ-ಚೀನಾ ನಡುವಿನ ಸಂಬಂಧ ಕುರಿತು ಸಂಸತ್ತಿನಲ್ಲಿ ಚರ್ಚೆಗೆ ಕಾಂಗ್ರೆಸ್ ಆಗ್ರಹ
ಹೊಸದಿಲ್ಲಿ: ಭಾರತ-ಚೀನಾ ಸಂಬಂಧ ಕುರಿತು ಸಂಸತ್ತಿನಲ್ಲಿ ನೀಡಿದ ಹೇಳಿಕೆಗಾಗಿ ರವಿವಾರ ಸರಕಾರದ ವಿರುದ್ಧ ವಾಗ್ದಾಳಿ ನಡೆಸಿರುವ ಕಾಂಗ್ರೆಸ್, 2020ರಲ್ಲಿ ಚೀನಾ ಏಕಪಕ್ಷೀಯವಾಗಿ ಗಡಿಯಲ್ಲಿ ಬಿಕ್ಕಟ್ಟು ಸೃಷ್ಟಿಸಿದ ನಂತರದ ಪರಿಸ್ಥಿತಿಯನ್ನು ಮೋದಿ ಸರಕಾರವು ಒಪ್ಪಿಕೊಂಡಿದೆಯೇ ಎಂದು ಪ್ರಶ್ನಿಸಿದೆ. ಉಭಯ ದೇಶಗಳ ನಡುವಿನ ಸಂಬಂಧದ ಸಂಪೂರ್ಣ ಸ್ವರೂಪದ ಬಗ್ಗೆ ಸಂಸತ್ತಿನಲ್ಲಿ ಚರ್ಚೆ ನಡೆಯಬೇಕು ಎಂದು ಅದು ಆಗ್ರಹಿಸಿದೆ.
‘ಚೀನಾ ನಾಲ್ಕು ವರ್ಷಗಳ ಹಿಂದೆ ನಮ್ಮ ಗಡಿಗಳಲ್ಲಿಯ ಯಥಾಸ್ಥಿತಿಯನ್ನು ಏಕಪಕ್ಷೀಯವಾಗಿ ಬದಲಿಸಿದ್ದರೂ ಆರ್ಥಿಕವಾಗಿ ಅದರ ಮೇಲೆ ನಮ್ಮ ಅವಲಂಬನೆ ಹೆಚ್ಚುತ್ತಲೇ ಇರುವುದರಿಂದ ವ್ಯೂಹಾತ್ಮಕ ಮತ್ತು ಆರ್ಥಿಕ ನೀತಿಗಳನ್ನು ಕೇಂದ್ರೀಕರಿಸಿ ಉಭಯ ದೇಶಗಳ ನಡುವಿನ ಸಂಬಂಧ ಕುರಿತು ಸಂಸತ್ತಿನಲ್ಲಿ ಚರ್ಚೆ ನಡೆಯಬೇಕು ’ಎಂದು ಕಾಂಗ್ರೆಸ್‌ನ ಪ್ರಧಾನ ಕಾರ್ಯದರ್ಶಿ(ಸಂವಹನ) ಜೈರಾಮ್ ರಮೇಶ್ ಅವರು ಹೇಳಿಕೆಯಲ್ಲಿ ಆಗ್ರಹಿಸಿದ್ದಾರೆ.
ಚೀನಾದೊಂದಿಗೆ ಭಾರತದ ಸಂಬಂಧಗಳಲ್ಲಿ ಇತ್ತೀಚಿನ ಬೆಳವಣಿಗೆಗಳ ಕುರಿತು ವಿದೇಶಾಂಗ ವ್ಯವಹಾರಗಳ ಸಚಿವ ಎಸ್.ಜೈಶಂಕರ್ ಅವರು ಸಂಸತ್ತಿನ ಉಭಯ ಸದನಗಳಲ್ಲಿ ನೀಡಿರುವ ಸ್ವಯಂಪ್ರೇರಿತ ಹೇಳಿಕೆಯನ್ನು ಕಾಂಗ್ರೆಸ್ ಅಧ್ಯಯನ ಮಾಡಿದೆ. ಸಂಸದರು ಯಾವುದೇ ಸ್ಪಷ್ಟೀಕರಣವನ್ನು ಕೇಳಲು ಅನುಮತಿ ನೀಡದ್ದು ದುರದೃಷ್ಟಕರವಾಗಿದೆ,ಆದರೆ ಇದು ಮೋದಿ ಸರಕಾರದಡಿ ಸಾಮಾನ್ಯವಾಗಿದೆ ಎಂದು ರಮೇಶ ಹೇಳಿದ್ದಾರೆ.
‘ಜೂನ್ 2020ರಲ್ಲಿ ಗಲ್ವಾನ್ ಕಣಿವೆಯಲ್ಲಿ ಹಿಂಸಾತ್ಮಕ ಘರ್ಷಣೆಗಳಿಗೆ ಕಾರಣವಾದ ಸಂದರ್ಭಗಳ ಬಗ್ಗೆ ಸದನಕ್ಕೆ ಚೆನ್ನಾಗಿ ತಿಳಿದಿದೆ ಎಂದು ಜೈಶಂಕರ್ ಹೇಳಿದ್ದನ್ನು ನಾವು ಗಮನಿಸಿದ್ದೇವೆ ’ಎಂದು ಹೇಳಿರುವ ಅವರು,2020 ಜೂ.19ರಂದು ಪ್ರಧಾನಿ ನರೇಂದ್ರ ಮೋದಿಯವರು ಬಹಿರಂಗವಾಗಿಯೇ ಚೀನಾಕ್ಕೆ ಕ್ಲೀನ್ ಚಿಟ್ ನೀಡಿ ನಮ್ಮ ಗಡಿಯಲ್ಲಿ ಯಾರೂ ನುಗ್ಗಿಲ್ಲ ಎಂದು ಸುಳ್ಳು ಹೇಳಿದಾಗ ಈ ಬಿಕ್ಕಟ್ಟಿನ ಕುರಿತು ಮೊದಲ ಅಧಿಕೃತ ಸಂದೇಶ ದೇಶಕ್ಕೆ ರವಾನೆಯಾಗಿತ್ತು.ಇದು ದುರದೃಷ್ಟಕರ ಜ್ಞಾಪನೆಯಾಗಿದೆ ಎಂದು ಬೆಟ್ಟು ಮಾಡಿದ್ದಾರೆ.
‘ಇದು ನಮ್ಮ ಹುತಾತ್ಮ ಯೋಧರಿಗೆ ಮಾಡಿದ್ದ ಅವಮಾನ ಮಾತ್ರವಲ್ಲ,ನಂತರದ ಮಾತುಕತೆಗಳಲ್ಲಿ ಭಾರತದ ನಿಲುವನ್ನೂ ದುರ್ಬಲಗೊಳಿಸಿತ್ತು’ ಎಂದಿರುವ ರಮೇಶ್, ಪ್ರಧಾನಿ ಯಾವ ಉದ್ದೇಶದಿಂದ ಆ ಹೇಳಿಕೆಯನ್ನು ನೀಡಿದ್ದರು ಎಂದು ಪ್ರಶ್ನಿಸಿದ್ದಾರೆ.