ಬಾಂಗ್ಲಾದೇಶದ ಹಿಂದೂ, ಕೈಸ್ತರಿಗೆ ನ್ಯಾಯ ಆಗ್ರಹಿಸಿ ಕೈ ಚೀಲದೊಂದಿಗೆ ಪ್ರಿಯಾಂಕಾ ಗಾಂಧಿ, ಕಾಂಗ್ರೆಸ್ ಸಂಸದರ ಪ್ರತಿಭಟನೆ
ಹೊಸದಿಲ್ಲಿ: ಬಾಂಗ್ಲಾದೇಶದಲ್ಲಿ ದೌರ್ಜನ್ಯ ಎದುರಿಸುತ್ತಿರುವ ಹಿಂದೂಗಳು ಹಾಗೂ ಕ್ರೈಸ್ತರಿಗೆ ನ್ಯಾಯ ಆಗ್ರಹಿಸಿ ಪ್ರಿಯಾಂಕಾ ಗಾಂಧಿ ವಾದ್ರಾ ಸೇರಿದಂತೆ ಕಾಂಗ್ರೆಸ್‌ನ ಹಲವು ಸಂಸದರು ಸಂಸತ್ತಿನ ಆವರಣದಲ್ಲಿ ಮಂಗಳವಾರ ಪ್ರತಿಭಟನೆ ನಡೆಸಿದರು.
‘ಬಾಂಗ್ಲಾದೇಶದ ಅಲ್ಪಸಂಖ್ಯಾತರ ಪರವಾಗಿ ನಿಲ್ಲುತ್ತೇವೆ’ ಎಂಬ ಘೋಷ ವಾಕ್ಯ ಬರೆದ ಕೈಚೀಲಗಳೊಂದಿಗೆ ಸಂಸದರು ಪ್ರತಿಭಟನೆ ನಡೆಸಿದರು. ಬಾಂಗ್ಲಾದೇಶದ ಅಲ್ಪಸಂಖ್ಯಾತರಿಗೆ ಕಾನೂನಿನ ಖಾತರಿ ನೀಡುವಂತೆ ಸರಕಾರವನ್ನು ಆಗ್ರಹಿಸಿ ಅವರು ಘೋಷಣೆಗಳನ್ನು ಕೂಗಿದರು.
ಕಾಂಗ್ರೆಸ್ ಸಂಸದೆ ಪ್ರಿಯಾಂಕಾ ಗಾಂಧಿ ವಾದ್ರಾ ‘‘ಬಾಂಗ್ಲಾದೇಶದ ಹಿಂದೂ ಹಾಗೂ ಕ್ರಿಶ್ಚಿಯನರ ಪರವಾಗಿ ನಿಲ್ಲುತ್ತೇವೆ’’ ಎಂಬ ಘೋಷ ವಾಕ್ಯವನ್ನು ಬರೆದ ಕೆನೆ ಬಣ್ಣದ ಕೈಚೀಲದೊಂದಿಗೆ ಸಂಸತ್ತಿನ ಆವರಣದಲ್ಲಿ ಕಾಣಿಸಿಕೊಂಡರು.
‘ಫೆಲೆಸ್ತೀನ್’ ಎಂದು ಬರೆದ ಕೈಚೀಲದೊಂದಿಗೆ ಪ್ರಿಯಾಂಕಾ ಗಾಂಧಿ ವಾದ್ರಾ ಫೆಲೆಸ್ತೀನ್ ಜನರ ಪರ ಬೆಂಬಲ ವ್ಯಕ್ತಪಡಿಸಿದ ದಿನದ ಬಳಿಕ ಅವರು ಬಾಂಗ್ಲಾದೇಶದ ಹಿಂದೂ ಹಾಗೂ ಕೈಸ್ತರ ಪರ ಘೋಷ ವಾಕ್ಯ ಬರೆದ ಕೈಚೀಲದೊಂದಿಗೆ ಸಂಸತ್ತಿನ ಆವರಣದಲ್ಲಿ ಕಂಡು ಬಂದಿದ್ದಾರೆ.
ಬಾಂಗ್ಲಾದೇಶದಲ್ಲಿ ದೌರ್ಜನ್ಯ ಎದುರಿಸುತ್ತಿರುವ ಹಿಂದೂ ಹಾಗೂ ಕ್ರೈಸ್ತರಿಗೆ ನ್ಯಾಯ ಆಗ್ರಹಿಸಿ ಪ್ರಿಯಾಂಕಾ ಗಾಂಧಿ ವಾದ್ರಾ ನೇತೃತ್ವದಲ್ಲಿ ಕಾಂಗ್ರೆಸ್‌ನ ಹಲವು ಸಂಸದರು ಸಂಸತ್ತಿನ ಆವರಣದಲ್ಲಿ ಸೋಮವಾರ ಪ್ರತಿಭಟನೆ ನಡೆಸಿದ್ದರು.
ಲೋಕಸಭೆಯಲ್ಲಿ ಸೋಮವಾರ ಶೂನ್ಯ ವೇಳೆಯಲ್ಲಿ ಮಾತನಾಡಿದ್ದ ಪ್ರಿಯಾಂಕಾ ಗಾಂಧಿ ವಾದ್ರಾ ಬಾಂಗ್ಲಾದೇಶದಲ್ಲಿ ದಾಳಿಯ ಕಾರಣಕ್ಕಾಗಿ ನೋವು ಅನುಭವಿಸುತ್ತಿರುವವರಿಗೆ ಸರಕಾರ ಬೆಂಬಲ ನೀಡುವಂತೆ ಕೋರಿದ್ದರು.
ಬಾಂಗ್ಲಾದೇಶದಲ್ಲಿ ಹಿಂದೂ ಹಾಗೂ ಕ್ರೈಸ್ತರ ಮೇಲೆ ನಡೆಯುತ್ತಿರುವ ದೌರ್ಜನ್ಯದ ಬಗ್ಗೆ ಸರಕಾರ ಧ್ವನಿ ಎತ್ತಬೇಕು. ಈ ಬಗ್ಗೆ ಬಾಂಗ್ಲಾದೇಶದ ಸರಕಾರದೊಂದಿಗೆ ಮಾತುಕತೆ ನಡೆಸಬೇಕು ಎಂದು ಪ್ರಿಯಾಂಕಾ ಗಾಂಧಿ ವಾದ್ರಾ ಹೇಳಿದ್ದಾರೆ.