ಮಣಿಪುರದಲ್ಲಿ ಸಹಜ ಸ್ಥಿತಿ ಇದೆ ಎಂದ ಬಿಜೆಪಿಗೆ ನಾಲ್ಕು ಪ್ರಶ್ನೆಗಳನ್ನಿಟ್ಟ ಕಾಂಗ್ರೆಸ್
ಹೊಸದಿಲ್ಲಿ: ಕಳೆದ ವಾರದ ಮೂರು ದಿನಗಳಲ್ಲಿನ ಹಿಂಸಾಚಾರವನ್ನು ಹೊರತುಪಡಿಸಿದರೆ, ಕಳೆದ ಮೂರು ತಿಂಗಳಿನಿಂದ ಮಣಿಪುರದಲ್ಲಿ ಸಹಜ ಸ್ಥಿತಿ ನೆಲೆಸಿದೆ ಎಂಬ ಕೇಂದ್ರ ಗೃಹ ಸಚಿವ ಅಮಿತ್ ಶಾ ಹೇಳಿಕೆಗೆ ತಿರುಗೇಟು ನೀಡಿರುವ ಕಾಂಗ್ರೆಸ್, ಬಿಜೆಪಿ ಎದುರು ನಾಲ್ಕು ಪ್ರಶ್ನೆಗಳನ್ನಿಟ್ಟಿದೆ.
ಈ ಕುರಿತು ಎಕ್ಸ್ ಸಾಮಾಜಿಕ ಮಾಧ್ಯಮದಲ್ಲಿ ಪೋಸ್ಟ್ ಮಾಡಿರುವ ಕಾಂಗ್ರೆಸ್ ಪಕ್ಷದ ಪ್ರಧಾನ ಕಾರ್ಯದರ್ಶಿ (ಸಂವಹನ) ಜೈರಾಮ್ ರಮೇಶ್, “ಒಂದು ವೇಳೆ ಸ್ವಘೋಷಿತ ಚಾಣಕ್ಯ ಹೇಳಿರುವಂತೆ ಮಣಿಪುರದಲ್ಲಿ ಸಹಜ ಸ್ಥಿತಿ ನೆಲೆಸಿರುವುದೇ ಆದರೆ, ಮಣಿಪುರದಲ್ಲಿ ಮೇ 2023ರಲ್ಲಿ ಹಿಂಸಾಚಾರ ಆರಂಭವಾದ ನಂತರ, ಇದುವರೆಗೂ ಯಾಕೆ ʼಅಜೈವಿಕʼ ಪ್ರಧಾನಿ ನರೇಂದ್ರ ಮೋದಿ ಮಣಿಪುರಕ್ಕೆ ಭೇಟಿ ನೀಡಿಲ್ಲ? ಅಜೈವಿಕ ಪ್ರಧಾನಿಯೇಕೆ ಮುಖ್ಯಮಂತ್ರಿ ಸೇರಿದಂತೆ ರಾಜ್ಯದ ರಾಜಕೀಯ ನಾಯಕರೊಂದಿಗೆ ಅರ್ಥಪೂರ್ಣ ಚರ್ಚೆ ನಡೆಸಿಲ್ಲ? ಯಾಕೆ ಮಣಿಪುರಕ್ಕೆ ಪೂರ್ಣಾವಧಿ ರಾಜ್ಯಪಾಲರನ್ನು ನೇಮಿಸಲಾಗಿಲ್ಲ ಹಾಗೂ ಕಳೆದ 45 ದಿನಗಳಿಂದ ಮುಖ್ಯ ಕಾರ್ಯದರ್ಶಿ ಏಕಿಲ್ಲ? ಯಾಕೆ ಹಲವಾರು ಸಚಿವರು ಮತ್ತು ಶಾಸಕರು ಮಣಿಪುರದಲ್ಲಿಲ್ಲ ಹಾಗೂ ಮಣಿಪುರದಲ್ಲಿನ ಬಿಜೆಪಿ ಕಾರ್ಯಾಲಯವೇಕೆ ಕಾರ್ಯಾಚರಣೆ ನಡೆಸುತ್ತಿಲ್ಲ?” ಎಂದು ನಾಲ್ಕು ಪ್ರಶ್ನೆಗಳನ್ನೊಡ್ಡಿದ್ದಾರೆ.
ಮಣಿಪುರದಲ್ಲಿನ ಜನಾಂಗೀಯ ಹಿಂಸಾಚಾರ ಮುಂದುವರಿದಿರುವುದರ ವಿರುದ್ಧ ಕಾಂಗ್ರೆಸ್ ಹಾಗೂ ಇನ್ನಿತರ ವಿರೋಧ ಪಕ್ಷಗಳು ಕೇಂದ್ರ ಸರಕಾರದ ವಿರುದ್ಧ ವಾಗ್ದಾಳಿ ನಡೆಸುತ್ತಿವೆ.
ಈ ನಡುವೆ, ಪ್ರಧಾನಿ ನರೇಂದ್ರ ಮೋದಿಯವರ ಮೂರನೆ ಅವಧಿಯ ಸರಕಾರಕ್ಕೆ 100 ದಿನ ತುಂಬಿದ ಹಿನ್ನೆಲೆಯಲ್ಲಿ ಪತ್ರಿಕಾಗೋಷ್ಠಿ ನಡೆಸಿದ್ದ ಕೇಂದ್ರ ಗೃಹ ಸಚಿವ ಅಮಿತ್ ಶಾ, ಮಣಿಪುರದಲ್ಲಿ ಸಹಜ ಸ್ಥಿತಿ ಇದೆ ಎಂದು ಪ್ರತಿಪಾದಿಸಿದ್ದರು. ಇದು ವಿರೋಧ ಪಕ್ಷಗಳಿಂದ ತೀವ್ರ ಟೀಕೆಗೆ ಗುರಿಯಾಗಿತ್ತು. ಇದರ ಬೆನ್ನಿಗೇ ಕಾಂಗ್ರೆಸ್ ಪಕ್ಷವು ಬಿಜೆಪಿಯೆದುರಿಗೆ ನಾಲ್ಕು ಪ್ರಶ್ನೆಗಗಳನ್ನಿಟ್ಟಿದೆ.