ಅಹ್ಮದಾಬಾದ್ ಪೂರ್ವ ಲೋಕಸಭಾ ಕ್ಷೇತ್ರದ ಸ್ಪರ್ಧೆಯಿಂದ ಹಿಂದೆ ಸರಿದ ಕಾಂಗ್ರೆಸ್ ಅಭ್ಯರ್ಥಿ ರೋಹನ್ ಗುಪ್ತಾ
ಅಹ್ಮದಾಬಾದ್: ನನ್ನ ತಂದೆಯ ಗಂಭೀರ ಆರೋಗ್ಯ ಸಮಸ್ಯೆಯ ಕಾರಣಕ್ಕೆ ನಾನು ಚುನಾವಣಾ ಕಣದಿಂದ ಹಿಂದೆ ಸರಿಯುತ್ತಿರುವುದಾಗಿ ಅಹ್ಮದಾಬಾದ್ ಪೂರ್ವ ಲೋಕಸಭಾ ಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿ ರೋಹನ್ ಗುಪ್ತಾ ಪ್ರಕಟಿಸಿದ್ದಾರೆ.
ರೋಹನ್ ಗುಪ್ತಾ ಕಾಂಗ್ರೆಸ್ ಪಕ್ಷದ ರಾಷ್ಟ್ರೀಯ ವಕ್ತಾರರಾಗಿದ್ದು, ಮಾರ್ಚ್ 12ರಂದು ಪ್ರಕಟಿಸಲಾಗಿದ್ದ ಅಭ್ಯರ್ಥಿಗಳ ಪಟ್ಟಿಯಲ್ಲಿ ಅವರ ಹೆಸರೂ ಇತ್ತು.
“ಗಂಭೀರ ಆರೋಗ್ಯ ಸಮಸ್ಯೆಯ ಕಾರಣಕ್ಕೆ ನನ್ನ ತಂದೆಯನ್ನು ಆಸ್ಪತ್ರೆಗೆ ದಾಖಲಿಸಲಾಗಿದ್ದು, ನಾನು ಅಹಮದಾಬಾದ್ ಪೂರ್ವ ಲೋಕಸಭಾ ಕ್ಷೇತ್ರದಿಂದ ಕಾಂಗ್ರೆಸ್ ಉಮೇದುವಾರಿಕೆಯಿಂದ ಹಿಂದೆಗೆಯುತ್ತಿದ್ದೇನೆ. ಪಕ್ಷವು ಆಯ್ಕೆ ಮಾಡುವ ನೂತನ ಅಭ್ಯರ್ಥಿಗೆ ನನ್ನ ಸಂಪೂರ್ಣ ಬೆಂಬಲವನ್ನು ನೀಡುತ್ತೇನೆ” ಎಂದು ರೋಹನ್ ಗುಪ್ತಾ ಎಕ್ಸ್ ಸಾಮಾಜಿಕ ಮಾಧ್ಯಮದಲ್ಲಿ ಸೋಮವಾರ ಬರೆದುಕೊಂಡಿದ್ದಾರೆ.
ಸ್ಪರ್ಧೆಯಿಂದ ಹಿಂದೆ ಸರಿಯುವ ತಮ್ಮ ನಿರ್ಧಾರದ ಕುರಿತು ಗುಜರಾತ್ ಕಾಂಗ್ರೆಸ್ ಅಧ್ಯಕ್ಷ ಶಕ್ತಿಸಿನ್ಹಾ ಗೋಹಿಲ್ ಅವರಿಗೆ ಕೈಬರಹದಲ್ಲಿ ಬರೆದಿರುವ ಪತ್ರದ ಪ್ರತಿಯನ್ನೂ ಅವರು ಪೋಸ್ಟ್ ಮಾಡಿದ್ದಾರೆ.
ಮೇ 7ರಂದು ಒಂದೇ ಹಂತದಲ್ಲಿ ನಡೆಯಲಿರುವ ಚುನಾವಣೆಯಲ್ಲಿ ಗುಜರಾತ್ ನ ಎಲ್ಲ 26 ಲೋಕಸಭಾ ಕ್ಷೇತ್ರಗಳಿಗೂ ಮತದಾನ ನಡೆಯಲಿದ್ದು, ಜೂನ್ 4ರಂದು ಮತ ಎಣಿಕೆ ನಡೆಯಲಿದೆ.
ಕಾಂಗ್ರೆಸ್ ಪಕ್ಷವು ಇನ್ನೂ 19 ಲೋಕಸಭಾ ಕ್ಷೇತ್ರಗಳಿಗೆ ತನ್ನ ಅಭ್ಯರ್ಥಿಗಳನ್ನು ಪ್ರಕಟಿಸಬೇಕಿದೆ.