ಉತ್ತರ ಪ್ರದೇಶ | ಆಮಂತ್ರಣವಿರಲಿ, ಇಲ್ಲದಿರಲಿ ಮಫ್ತಿ ದಿರಿಸಿನಲ್ಲಿ ವಿವಾಹಗಳಿಗೆ ಹಾಜರಾಗಲಿರುವ ಪೊಲೀಸರು!

Update: 2024-11-13 16:40 GMT

ಸಾಂದರ್ಭಿಕ ಚಿತ್ರ | PC : Freepik

ಆಗ್ರಾ : ಇನ್ನು ಮುಂದೆ ಆಗ್ರಾ ಪೊಲೀಸ್ ಸಿಬ್ಬಂದಿಗಳು ಆಮಂತ್ರಣವಿರಲಿ, ಇಲ್ಲದಿರಲಿ ತಮ್ಮ ವ್ಯಾಪ್ತಿಯ ಎಲ್ಲ ವಿವಾಹೋತ್ಸವಗಳಿಗೂ ತಪ್ಪದೆ ಹಾಜರಾಗಲಿದ್ದಾರೆ. ಕಾರಣವೇನು ಗೊತ್ತೆ? ವಿವಾಹೋತ್ಸವಗಳಲ್ಲಿ ನಡೆಯುವ ಕಳ್ಳತನ ಪ್ರಕರಣಗಳನ್ನು ಮಟ್ಟ ಹಾಕಲು!

ವಿವಾಹ ಕಾರ್ಯಕ್ರಮಗಳಿಗೆ ಅನುಮಾನಾಸ್ಪದವಾಗಿ ಬರುವ ಅತಿಥಿಗಳು, ವಿಶೇಷವಾಗಿ ಬೆಳೆ ಬಾಳುವ ವಸ್ತುಗಳನ್ನು ಕದಿಯಲು ಕಳ್ಳರ ಗುಂಪುಗಳು ಬಳಸಿಕೊಳ್ಳುವ ಮಕ್ಕಳ ಮೇಲೆ ನಿಗಾ ಇಡಲು ಆಗ್ರಾ ಪೊಲೀಸರು ವಿಶೇಷ ತಂಡವನ್ನು ರಚಿಸಿದ್ದಾರೆ ಎಂದು ಬುಧವಾರ ಅಧಿಕಾರಿಗಳು ತಿಳಿಸಿದ್ದಾರೆ.

ಈ ಕುರಿತು ಪ್ರತಿಕ್ರಿಯಿಸಿರುವ ಆಗ್ರಾದ ಉಪ ಪೊಲೀಸ್ ಆಯುಕ್ತ ಸೂರಜ್ ರಾಯ್, ಪೊಲೀಸ್ ಪಡೆಯ ಸದಸ್ಯರನ್ನು ಸಾಧಾರಣ ಉಡುಪಿನಲ್ಲಿ ವಿವಾಹ ಕಾರ್ಯಕ್ರಮಗಳಲ್ಲಿ ನಿಯೋಜಿಸಲಾಗುವುದು ಹಾಗೂ ಅವರು ಕುಟುಂಬದ ಸದಸ್ಯರಂತೆಯೆ ವಿವಾಹ ಕಾರ್ಯಕ್ರಮಗಳಲ್ಲಿ ಭಾಗವಹಿಸಲಿದ್ದಾರೆ ಎಂದು ತಿಳಿಸಿದ್ದಾರೆ.

“ಈ ಹಿಂದೆ ವಿವಾಹ ಕಾರ್ಯಕ್ರಮಗಳಲ್ಲಿ ಜರುಗಿದ್ದ ಕಳ್ಳತನದ ಕ್ರಮಗಳನ್ನು ಗಮನದಲ್ಲಿಟ್ಟುಕೊಂಡು ಈ ಉಪಕ್ರಮವನ್ನು ಕೈಗೆತ್ತಿಕೊಳ್ಳಲಾಗಿದೆ. ಕಳ್ಳರ ಗುಂಪುಗಳು ವಧು ಮತ್ತು ವರನ ಪೋಷಕರನ್ನು ಗುರಿಯಾಗಿಸಿಕೊಳ್ಳುತ್ತವೆ ಹಾಗೂ ಅವರಿಗೆ ಸಂಬಂಧಿಸಿದ ಆಭರಣ ಮತ್ತು ನಗದು ಸೇರಿದಂತೆ ಇನ್ನಿತರ ಬೆಲೆ ಬಾಳುವ ವಸ್ತುಗಳನ್ನು ದೋಚುತ್ತಾರೆ” ಎಂದು ಅವರು ಸುದ್ದಿಗಾರರಿಗೆ ತಿಳಿಸಿದ್ದಾರೆ.

“ವಿವಾಹದ ಹುಲ್ಲುಹಾಸುಗಳು ಹಾಗೂ ಬ್ಯಾಂಕ್ವೆಟ್ ಹಾಲ್ ಗಳು, ಅಂತಹುದೇ ಇನ್ನಿತರ ಸ್ಥಳಗಳನ್ನು ಹದಿನೆಂಟು ಕ್ಲಸ್ಟರ್ ಗಳಲ್ಲಿ ಗುರುತಿಸಲಾಗಿದೆ. ಪ್ರತಿ ಕ್ಲಸ್ಟರ್ ನಲ್ಲಿ ಪೊಲೀಸ್ ಸಿಬ್ಬಂದಿಗಳ ಮೂರು ತಂಡಗಳಿರುತ್ತವೆ. ಅವರನ್ನು ಸಾಧಾರಣ ಉಡುಪಿನಲ್ಲಿ ನಿಯೋಜಿಸಲಾಗುತ್ತದೆ ಹಾಗೂ ಅವರ ಕರ್ತವ್ಯವನ್ನು ಅದಕ್ಕೆ ತಕ್ಕಂತೆ ಮಾರ್ಪಡಿಸಲಾಗುತ್ತದೆ. ಸಿಸಿಟಿವಿ ಕ್ಯಾಮೆರಾಗಳ ಮೂಲಕವೂ ನಿಗಾ ಇಡಲಾಗುತ್ತದೆ” ಎಂದೂ ಅವರು ಹೇಳಿದ್ದಾರೆ.

“ಇತರ ಜಿಲ್ಲೆಗಳು ಅಥವಾ ಪ್ರಾಂತ್ಯಗಳಲ್ಲಿನ ವಿವಾಹ ಕಾರ್ಯಕ್ರಮಗಳಲ್ಲಿ ಪಾಲ್ಗೊಳ್ಳಲು ತೆರಳುವ ಆಗ್ರಾ ನಿವಾಸಿಗಳು, ಈ ಕುರಿತು ಸ್ಥಳೀಯ ಪೊಲೀಸ್ ಠಾಣೆಗಳು ಅಥವಾ ಪೊಲೀಸ್ ಚೌಕಿಗಳಿಗೆ ಮಾಹಿತಿ ನೀಡಬಹುದಾಗಿದೆ. ಅದರಿಂದ, ಅವರ ಗೈರಿನಲ್ಲಿ ಅವರ ನಿವಾಸಗಳ ಸುತ್ತ ಗಸ್ತು ನಡೆಸಲು ಸಾಧ್ಯವಾಗಲಿದೆ. ಈ ಉಪಕ್ರಮದ ಬಹು ಮುಖ್ಯ ಉದ್ದೇಶ ವಿವಾಹ ಋತುವಿನಲ್ಲಿನ ವಿವಾಹ ಕಾರ್ಯಕ್ರಮಗಳಲ್ಲಿ ನಡೆಯುವ ಕಳವು ಪ್ರಕರಣಗಳನ್ನು ತಡೆಯುವುದಾಗಿದೆ” ಎಂದು ಅವರು ತಿಳಿಸಿದ್ದಾರೆ.

Tags:    

Writer - ವಾರ್ತಾಭಾರತಿ

contributor

Editor - Ismail

contributor

Byline - ವಾರ್ತಾಭಾರತಿ

contributor

Similar News