ಮೊದಲ ಟೆಸ್ಟ್‌ನಲ್ಲಿ ಭಾಗವಹಿಸುವ ಕುರಿತು ಅಸ್ಪಷ್ಟತೆ ; ಮುಂಬೈನಲ್ಲಿ ರೋಹಿತ್ ಶರ್ಮಾ ಅಭ್ಯಾಸ
ಹೊಸದಿಲ್ಲಿ: ಮುಂಬರುವ ಬಾರ್ಡರ್-ಗವಾಸ್ಕರ್ ಟ್ರೋಫಿಗಾಗಿ ನಡೆಯುವ ಟೆಸ್ಟ್ ಸರಣಿಯ ಮೊದಲ ಪಂದ್ಯದಲ್ಲಿ ಭಾರತ ಕ್ರಿಕೆಟ್ ತಂಡದ ನಾಯಕ ರೋಹಿತ್ ಶರ್ಮಾ ಭಾಗವಹಿಸುವ ಕುರಿತಂತೆ ಸ್ಪಷ್ಟತೆ ಇಲ್ಲ. ಟೀಮ್ ಇಂಡಿಯಾದೊಂದಿಗೆ ಆಸ್ಟ್ರೇಲಿಯಕ್ಕೆ ಪ್ರಯಾಣಿಸದ ರೋಹಿತ್ ಅವರು ಮುಂಬೈನಲ್ಲಿ ಬ್ಯಾಟಿಂಗ್ ಅಭ್ಯಾಸ ನಡೆಸುತ್ತಿದ್ದಾರೆ.
37ರ ಹರೆಯದ ರೋಹಿತ್ ರಿಲಯನ್ಸ್ ಕಾರ್ಪೊರೇಟ್ ಪಾರ್ಕ್(ಆರ್‌ಸಿಪಿ)ನಲ್ಲಿ ಇಂದು ಕಠಿಣ ಅಭ್ಯಾಸ ನಡೆಸಿದರು. ರೋಹಿತ್ ಭಾರತದಲ್ಲಿ ತನ್ನ ಸಮಯವನ್ನು ಬಳಸಿಕೊಳ್ಳಲು ಬಯಸಿದ್ದು, ಆಸ್ಟ್ರೇಲಿಯದಲ್ಲಿ ಎದುರಾಗುವ ಸವಾಲಿಗೆ ಸಜ್ಜಾಗುತ್ತಿದ್ದಾರೆ ಎಂದು ತಿಳಿದು ಬಂದಿದೆ. ರೋಹಿತ್ ಅವರು ಮುಂಬೈ ಕ್ರಿಕೆಟ್ ಸಂಸ್ಥೆ(ಎಂಸಿಎ)ಹಾಗೂ ಆರ್‌ಸಿಪಿಯಲ್ಲಿರುವ ಸೌಲಭ್ಯಗಳನ್ನು ಬಳಸಿಕೊಂಡು ಅಭ್ಯಾಸ ನಡೆಸುತ್ತಿದ್ದಾರೆ.
ತನ್ನ ಎರಡನೇ ಮಗುವಿನ ಜನನದ ನಂತರ ರೋಹಿತ್ ಅವರು ಆಸ್ಟ್ರೇಲಿಯಕ್ಕೆ ಪ್ರಯಾಣಿಸುವ ಬಗ್ಗೆ ನಿರ್ಧಾರ ಕೈಗೊಳ್ಳಲಿದ್ದಾರೆ.
ರೋಹಿತ್ ಯಾವಾಗ ಆಸ್ಟ್ರೇಲಿಯಕ್ಕೆ ತೆರಳುತ್ತಾರೆಂಬ ಕುರಿತು ಸ್ಪಷ್ಟತೆ ಇಲ್ಲ. ತನ್ನ ಪತ್ನಿ ಹಾಗೂ ಕುಟುಂಬದೊಂದಿಗೆ ಉಳಿಯುವ ಮೂಲಕ ಈ ಹಂತದಲ್ಲಿ ತಂದೆಯಾಗಿ ಏನು ಮಾಡಬೇಕೊ ಅದನ್ನು ಮಾಡುತ್ತಿದ್ದಾರೆ. ಮುಂಬೈನಲ್ಲಿ ಸಾಧ್ಯವಾದಷ್ಟು ಅವಕಾಶವನ್ನು ಬಳಸಿಕೊಂಡು ಬ್ಯಾಟಿಂಗ್ ಅಭ್ಯಾಸ ಮಾಡುತ್ತಿದ್ದಾರೆ ಎಂದು ಮೂಲಗಳು ತಿಳಿಸಿವೆ.
ಭಾರತೀಯ ಆಟಗಾರರು ನ.10 ಹಾಗೂ 11ರಂದು ಎರಡು ಬ್ಯಾಚ್‌ಗಳಲ್ಲಿ ಮುಂಬೈನಿಂದ ಪರ್ತ್‌ಗೆ ತೆರಳಿದ್ದಾರೆ. ಶುಭಮನ್ ಗಿಲ್, ಯಶಸ್ವಿ ಜೈಸ್ವಾಲ್, ಮುಹಮ್ಮದ್ ಸಿರಾಜ್, ಆಕಾಶ್ ದೀಪ್ ಹಾಗೂ ಸುಂದರ್ ಅವರು ಸಹಾಯಕ ಕೋಚ್ ಅಭಿಷೇಕ್ ನಾಯರ್ ಜೊತೆ ನ.10ರಂದು ತೆರಳಿದರೆ, ಉಳಿದವರು ನ.11ರಂದು ಮುಖ್ಯ ಕೋಚ್ ಗೌತಮ್ ಗಂಭೀರ್ ಜೊತೆಗೆ ತೆರಳಿದ್ದಾರೆ.
ಸ್ಟಾರ್ ಬ್ಯಾಟರ್ ವಿರಾಟ್ ಕೊಹ್ಲಿ ರವಿವಾರ ಸಂಜೆ ಪರ್ತ್‌ಗೆ ತಲುಪಿದ ಮೊದಲ ಆಟಗಾರನಾಗಿದ್ದಾರೆ. ಮಾಜಿ ನಾಯಕ ಕೊಹ್ಲಿ ಶನಿವಾರ ತನ್ನ ಪತ್ನಿ ಅನುಷ್ಕಾ ಹಾಗೂ ಇಬ್ಬರು ಮಕ್ಕಳೊಂದಿಗೆ ಮುಂಬೈ ಏರ್‌ಪೋರ್ಟ್‌ನಿಂದ ಆಸ್ಟ್ರೇಲಿಯಕ್ಕೆ ಪ್ರಯಾಣಿಸಿದ್ದರು. ಉಪ ನಾಯಕ ಜಸ್‌ಪ್ರಿತ್ ಬುಮ್ರಾ ಸೋಮವಾರ ರಾತ್ರಿ ತೆರಳಿದರು.
ರೋಹಿತ್ ಅನುಪಸ್ಥಿತಿಯಲ್ಲಿ ಬುಮ್ರಾ ತಂಡವನ್ನು ಮುನ್ನಡೆಸಲಿದ್ದಾರೆ ಎಂದು ಗಂಭೀರ್ ಈಗಾಗಲೇ ಖಚಿತಪಡಿಸಿದ್ದಾರೆ. ಅಭಿಮನ್ಯು ಈಶ್ವರನ್ ಹಾಗೂ ಕೆ.ಎಲ್.ರಾಹುಲ್ ಆರಂಭಿಕ ಆಟಗಾರನ ಸ್ಥಾನಕ್ಕೆ ಸ್ಪರ್ಧೆಯಲ್ಲಿದ್ದಾರೆ ಎಂದು ಅವರು ಹೇಳಿದ್ದಾರೆ.